ಅಕ್ಟೋಬರ್ 2020 and ನವೆಂಬರ್ 2020 ಕಾರ್ಯಕ್ರಮಗಳು


ಗಾಂಧಿಜಿ ಜಯಂತಿ ಮತ್ತು ಲಾಲ್ ಬಹದ್ದೂರ್ ಶಾಸ್ತ್ರಿ ಜಯಂತಿ ಆಚರಣೆ

ಸುತ್ತೂರಿನ ಜೆಎಸ್ಎಸ್ ಶಿಕ್ಷಣ ಸಂಸ್ಥೆಯ ಸಮುಚ್ಚಯದಲ್ಲಿ ಗಾಂಧಿಜಿ ಜಯಂತಿ ಮತ್ತು ಲಾಲ್ ಬಹದ್ದೂರ್ ಶಾಸ್ತ್ರಿ ಜಯಂತಿ ಆಚರಿಸಲಾಯಿತು. ಈ ಸಂದರ್ಭದಲ್ಲಿ ಸುತ್ತೂರಿನ ಜೆಎಸ್ಎಸ್ ಶಿಕ್ಷಣ ಮಹಾವಿದ್ಯಾಲಯದ ಪ್ರಾಂಶುಪಾಲರಾದ ಡಾ. ಎಂ.ಸಿ. ನಟರಾಜ್ ರವರು ಮಾತನಾಡಿ ಮಹಾತ್ಮ ಗಾಂಧೀಜಿಯವರು ಸಮಾನತೆಯ ಕುರಿತು ತಮ್ಮ ಜೀವಿತಾಧಿಯಲ್ಲಿ ಪ್ರತಿಪಾದಿಸಿದರು. ಸಮಾಜದಲ್ಲಿ ಸಮಾನತೆ ಇಲ್ಲದಿದ್ದರೆ ಅದು ಉತ್ತಮ ಸಮಾಜವಲ್ಲ ಹಾಗೂ ಸಮತೆ ಇಲ್ಲದೆ ಸಮಾನತೆ ವ್ಯರ್ಥವೆಂದು ತಿಳಿಸಿದರು. ಲಾಲ್ ಬಹದ್ದೂರ್ ಶಾಸ್ತ್ರಿರವರ ಕುರಿತು ಮಾತನಾಡುತ್ತಾ ಶ್ರೀಯುತರು ಸರಳ ಸಜ್ಜನಿಕೆಗೆ ಹೆಸರುವಾಸಿಯಾಗಿದ್ದರು. ದೇಶದ ಸಂಕಷ್ಟದ ಸಮಯದಲ್ಲಿ ‘ಜೈ ಜವಾನ್ ಜೈ ಕಿಸಾನ್’ ಎಂದು ದೇಶವಾಸಿಗಳಿಗೆ ಕರೆ ನೀಡಿ ದೇಶವನ್ನು ಅಭಿವೃದ್ಧಿಪಥದಲ್ಲಿ ಮುನ್ನೆಡೆಸಿದರು ಎಂದು ತಿಳಿಸಿದರು. ಕಾರ್ಯಕ್ರಮದಲ್ಲಿ 115 ಸಿಬ್ಬಂದಿವರ್ಗದವರು ಭಾಗವಹಿಸಿದ್ದರು.


ರೈತ ಮಹಿಳಾ ದಿನಾಚರಣೆ

ದಿನಾಂಕ 15.10.2020 ರಂದು ಸುತ್ತೂರಿನ ಜೆಎಸ್ಎಸ್ ಕೆವಿಕೆ ಹಾಗು ನಂಜನಗೂಡಿನ ಶ್ರೀ ನಂಜುಂಡೇಶ್ವರ ಮಹಿಳಾ ಕಳಂಜಿಯ ಒಕ್ಕೂಟದ ಸಹಯೋಗದಲ್ಲಿ ರಾಷ್ಟ್ರೀಯ ರೈತ ಮಹಿಳಾ ದಿನಾಚರಣೆ ಹಾಗೂ ವಿಶ್ವ ಕೈ ಶುಚಿತ್ವ ದಿನವನ್ನು ಆಚರಿಸಲಾಯಿತು. ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಮೈಸೂರಿನ ಧಾನ್ ಫೌಂಡೇಶನ್ ಜಿಲ್ಲಾ ವಲಯ ಸಂಯೋಜಕರಾದ ಶ್ರೀ ಶಂಕರ್ ಪ್ರಸಾದ್ ರವರು ಮಾತನಾಡಿ ಕೃಷಿಯಲ್ಲಿ ಮಹಿಳೆಯರ ಪಾತ್ರ ಬಹುಮುಖ್ಯವಾದುದು. ಕೃಷಿ ಮಹಿಳೆಯರು ಕೃಷಿ ಉದ್ಯಮದಲ್ಲಿ ತಮ್ಮನ್ನು ತೊಡಗಿಸಿಕೊಂಡು ಆರ್ಥಿಕವಾಗಿ ಸಬಲರಾಗಬೇಕೆಂದರು. ಪ್ರಗತಿಪರ ಕೃಷಿ ಮಹಿಳೆಯಾದ ಶ್ರೀಮತಿ ಕೆ.ಎಸ್. ವಸಂತಮ್ಮನವರು ಮಾತನಾಡಿ ಮಹಿಳೆಯರು ಕೃಷಿಯಲ್ಲಿ ತೊಡಗಿಸಿಕೊಳ್ಳುವುದರ ಜೊತೆಗೆ ಇತರೆ ಕೃಷಿ ಉಪಕಸುಬುಗಳಲ್ಲಿ ತೊಡಗಿಸಿಕೊಳ್ಳಬೇಕೆಂದು ಕಿವಿಮಾತು ಹೇಳಿದರು. ಸದರಿ ಕಾರ್ಯಕ್ರಮದಲ್ಲಿ 58 ರೈತ ಮಹಿಳೆಯರು ಭಾಗವಹಿಸಿದ್ದರು.


ವಿಶ್ವ ಆಹಾರ ದಿನಾಚರಣೆ

ನಂಜನಗೂಡಿನ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಬಿ.ಸಿ. ಟ್ರಸ್ಟ್ (ರಿ) ರವರ ಸಹಯೋಗದೊಂದಿಗೆ ದಿನಾಂಕ 16.10.2020 ರಂದು ಕೆವಿಕೆಯಲ್ಲಿ ವಿಶ್ವ ಆಹಾರ ದಿನಾಚರಣೆಯನ್ನು ಹಮ್ಮಿಕೊಳ್ಳಲಾಗಿತ್ತು. ಟ್ರಸ್ಟ್ ನ ಯೋಜನಾಧಿಕಾರಿಯಾದ ಶ್ರೀ ಆನಂದ್ ಗೌಡ್ರು ಮಾತನಾಡಿ ಪೂರ್ವಜರ ಆಹಾರ ಪದ್ಧತಿಗಳ ಪ್ರಾಮುಖ‍್ಯತೆ ಬಗ್ಗೆ ಮಾಹಿತಿ ನೀಡಿ ಮುಂದಿನ ಪೀಳಿಗೆಗೆ ಸದರಿ ಪದ್ಧತಿಗಳನ್ನು ಅಳವಡಿಸಿಕೊಳ್ಳಲು ಸೂಚಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಕೆವಿಕೆಯ ಕೇಂದ್ರದ ಮುಖ್ಯಸ್ಥರಾದ ಶ್ರೀ ಎಸ್. ಸತೀಶ್ ರವರು ಮಾತನಾಡಿ ಭಾರತವು ಕೃಷಿ ಕ್ಷೇತ್ರದಲ್ಲಿ ಸ್ವಾವಲಂಬಿಯಾಗಿದೆ, ಆದರೆ, ಪೌಷ್ಟಿಕತೆಯಲ್ಲಿ ನಿರೀಕ್ಷಿತ ಮಟ್ಟವನ್ನು ತಲುಪಲಾಗಿಲ್ಲ ಎಂದು ತಿಳಿಸಿದರು. ಶೇ. 14ರಷ್ಟು ಆಹಾರ ಉತ್ಪಾದನೆಗಳು ಮಾರುಕಟ್ಟೆ ತಲುಪುವ ವರೆಗೆ ನಷ್ಟವಾಗುತ್ತಿದೆ. ಆದಕಾರ ಕೃಷಿ ಮಹಿಳೆಯರು ಕೈತೋಟಕ್ಕೆ ಹೆಚ್ಚಿನ ಮಹತ್ವನೀಡಿ ಉತ್ತಮ ಗುಣಮಟ್ಟದ ತರಕಾರಿಗಳನ್ನು ಸೇವಿಸಿ ಪೌಷ್ಟಿಕತೆಯನ್ನು ಹಚ್ಚಿಸಿಕೊಳ್ಳಲು ಕರೆನೀಡಿದರು. ಕಾರ್ಯಕ್ರಮದಲ್ಲಿ 75 ರೈತ ಹಾಗೂ ರೈತ ಮಹಿಳೆಯರ ಭಾಗವಹಿಸಿದ್ದರು.


ಚಿಯಾ ತರಬೇತಿ

ದಿನಾಂಕ 04 ನವೆಂಬರ್ 2020 ರಂದು ಹೆಚ್.ಡಿ. ಕೋಟೆ ತಾಲ್ಲುಕಿನ ಮಾಗುಡಿಲು ಗ್ರಾಮದಲ್ಲಿ ಚಿಯಾ ಬೆಳೆಯ ಕುರಿತು ತರಬೇತಿಯನ್ನು ಹಮ್ಮಿಕೊಳ್ಳಲಾಗಿತ್ತು. ಸದರಿ ತರಬೇತಿಯಲ್ಲಿ ಚಿಯಾ ಬೆಳೆಯ ಪ್ರಾಮುಖ್ಯತೆ, ಬೇಸಾಯ ಕ್ರಮ ಹಾಗೂ ಮಾರುಕಟ್ಟೆ ಕುರಿತು ವಿವರವನ್ನು ನೀಡಲಾಯಿತು. 25 ರೈತರು ಸದರಿ ತರಬೇತಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.


ಸಾವಯವ ಕೃಷಿ ಪ್ರಮಾಣಿಕರಣ ತರಬೇತಿ

ದಿನಾಂಕ 19 ನವೆಂಬರ್ 2020 ರಂದು ಹೆಚ್.ಡಿ. ಕೋಟೆ ತಾಲ್ಲುಕಿನ ಚಾಕಹಳ್ಳಿ ಗ್ರಾಮದಲ್ಲಿ ಸಾವಯವ ಕೃಷಿ ಪ್ರಮಾಣೀಕರಣ ತರಬೇತಿಯನ್ನು ಹಮ್ಮಿಕೊಳ್ಳಲಾಗಿತ್ತು. ಕರ್ನಾಟಕ ರಾಜ್ಯ ಬೀಜ ಹಾಗೂ ಸಾವಯವ ಪ್ರಮಾಣೀಕರಣ ಸಂಸ್ಥೆಯ ಉಪನಿರ್ದೇಶಕರಾದ ಶ್ರೀ ಪ್ರಸನ್ನರವರು ಮಾತನಾಡಿ ಸಾವಯವ ಪ್ರಮಾಣೀಕರಣ ಮಾಡಿಸಲು ರೈತರು ಅನುಸರಿಸಬೇಕಾದ ಅಂಶಗಳ ಕುರಿತು ಮಾಹಿತಿ ನೀಡಿದರು. ಕರ್ನಾಟಕ ರಾಜ್ಯ ಬೀಜ ಹಾಗೂ ಸಾವಯವ ಪ್ರಮಾಣೀಕರಣ ಸಂಸ್ಥೆಯ ಅಧಿಕಾರಿಯಾದ ಶ್ರೀ ಷರೀಫ್ ರವರು ಮಾತನಾಡಿ ಸಾವಯವ ರೈತರ ಗುಂಪು ರಚನೆ, ಕಾರ್ಯವೈಖರಿ ಕುರಿತು ಮಾಹಿತಿ ನೀಡಿದರು. ಕೆವಿಕೆ ವಿಜ್ಞಾನಿಗಳು ಜೀವಾಮೃತ, ಪಂಚಗವ್ಯಗಳನ್ನು ತಯಾರಿಸುವಿಕೆ ರೋಗ ಮತ್ತು ಕೀಟಗಳ ನಿರ್ವಹಣೆಗೆ ವಿವಿಧ ಜೈವಿಕ ವಿಧಾನಗಳು ಹಾಗೂ ಕಷಾಯಗಳ ಬಗ್ಗೆ ರೈತರಿಗೆ ತಿಳಿಸಿದರು. 40 ರೈತರು ಸದರಿ ತರಬೇತಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.


ತಲಘಟ್ಟಪುರ ಹಾಗೂ ಕೇತಹಳ್ಳಿ ಜಮೀನುಗಳಿಗೆ ಕ್ಷೇತ್ರ ಭೇಟಿ

ದಿನಾಂಕ 24 ನವೆಂಬರ್ 2020 ರಂದು ಕೆವಿಕೆ ವಿಜ್ಞಾನಿಗಳು ತಲಘಟ್ಟಪುರ ಹಾಗೂ ಕೇತುಹಳ್ಳಿ ಜಮೀನುಗಳಿಗೆ ಕ್ಷೇತ್ರ ಭೇಟಿ ಮಾಡಿ ಹನಿ ನೀರಾವರಿ ಹಾಗೂ ಅಧುನಿಕ ತಂತ್ರಜ್ಞಾನವನ್ನೊಳಗೊಂಡ ಡೈರಿ, ಬಯೋಗ್ಯಾಸ್ ಪ್ಲಾಂಟ್ ಹಾಗೂ ತೋಟಗಾರಿಕೆ ಬೆಳೆಗಳನ್ನು ವೀಕ್ಷಿಸಿ ಮಾಹಿತಿ ಪಡೆದರು.


ಸುಸ್ಥಿರ ಕೃಷಿಗಾಗಿ ಸಾವಯವ ಕೃಷಿ ಆನ್ ಲೈನ್ ಸರಣಿ ತರಬೇತಿ

ಕೃಷಿ ಸಂವಹನ ವೇದಿಕೆ, ಮೈಸೂರು, ಜಿಲ್ಲಾ ಕೃಷಿ ತರಬೇತಿ ಕೇಂದ್ರ, ನಾಗನಹಳ್ಳಿ, ಕೃಷಿ ತಂತ್ರಜ್ಞಾನ ಸಂಸ್ಥೆ, ಕೃಷಿ ತಂತ್ರಜ್ಞಾನ ನಿರ್ವಹಣೆ ಸಂಸ್ಥೆ, ವಿಸ್ತರಣಾ ಘಟಕ, ನಾಗನಹಳ್ಳಿ, ಸಾವಯವ ಕೃಷಿ ಸಂಶೋಧನಾ ಕೇಂದ್ರ, ನಾಗನಹಳ್ಳಿ, ತೋಟಗಾರಿಕೆ ಮಹಾವಿದ್ಯಾಲಯ, ಮೈಸೂರು, ಫಿನಿಕ್ಸ್ ಅಕಾಡೆಮಿ, ಮೈಸೂರು ಹಾಗೂ ಜೆಎಸ್ಎಸ್ ಕೃಷಿ ವಿಜ್ಞಾನ ಕೇಂದ್ರ, ಸುತ್ತೂರು ಇವರ ಸಂಯುಕ್ತಾಶ್ರಯದಲ್ಲಿ ಸುಸ್ಥಿರ ಕೃಷಿಗಾಗಿ ಸಾವಯವ ಕೃಷಿ ಅನ್ ಲೈನ್ ಸರಣಿ ತರಬೇತಿಯನ್ನು ಪ್ರತಿ ಸೋಮವಾರ ದಿನಾಂಕ 23.11.2020 ರಿಂದ ಹಮ್ಮಿಕೊಳ್ಳಲಾಗಿದೆ.

ಹಕ್ಕುಗಳನ್ನು ಕಾಯ್ದಿರಿಸಿದೆ : ಹಿರಿಯ ವಿಜ್ಞಾನಿ ಮತ್ತು ಮುಖ್ಯಸ್ಥರು, ಐಸಿಎಆರ್ ಜೆಎಸ್ಎಸ್ ಕೃಷಿ ವಿಜ್ಞಾನ ಕೇಂದ್ರ, ಸುತ್ತೂರು, ಮೈಸೂರು ಜಿಲ್ಲೆ                    ಭೇಟಿ ಸಂಖ್ಯೆ: