ಆಗಸ್ಟ್ ಮತ್ತು ಸೆಪ್ಟೆಂಬರ್ 2022 ಕಾರ್ಯಕ್ರಮಗಳು


ಅವರೆ ತರಬೇತಿ

ದಿನಾಂಕ ೨ ಆಗಸ್ಟ್ ೨೦೨೨ ರಂದು ಹುಣಸೂರು ತಾಲ್ಲೂಕಿನ ಹುಲ್ಯಾಳು ಗ್ರಾಮದಲ್ಲಿ ಅವರೆ ಅರ್ಕಾ ಸಂಭ್ರಮ್ ತಳಿ ಕುರಿತು ತರಬೇತಿಯನ್ನು ಹಮ್ಮಿಕೊಳ್ಳಲಾಗಿತ್ತು. ಈ ತರಬೇತಿಯಲ್ಲಿ ಕೆವಿಕೆಯ ತೋಟಗಾರಿಕೆ ವಿಜ್ಞಾನಿ ಡಾ. ವಿನಯ್ ಜಿ. ಎಮ್. ರವರು ಅರ್ಕಾ ಸಂಭ್ರಮ್ ತಳಿ ಬಗ್ಗೆ ವಿವರಿಸಿ ಆಯ್ದ ೧೦ ಜನ ರೈತರಿಗೆ ಅರ್ಕಾ ಸಂಭ್ರಮ್ ತಳಿಯ ಬೀಜಗಳು ಹಾಗೂ ತರಕಾರಿ ಸಮೃದ್ಧಿಯನ್ನು ವಿತರಿಸಿದರು.


ಮಿಶ್ರ ತಳಿ ಹಸುಗಳಲ್ಲಿ ಪೌಷ್ಟಿಕತೆಯ ನಿರ್ವಹಣೆ ತರಬೇತಿ

ದಿನಾಂಕ ೦೨.೦೮.೨೦೨೨ ರಂದು ಪಿರಿಯಾಪಟ್ಟಣ ತಾಲ್ಲೂಕಿನ ಬೆಟ್ಟದಪುರ ಹೋಬಳಿಯ ಬಿಟಿಎಮ್ ಕೊಪ್ಪಲು ಗ್ರಾಮದಲ್ಲಿ ಹೆಚ್ಚು ಹಾಲು ನೀಡುವ ಮಿಶ್ರ ತಳಿ ಹಸುಗಳಲ್ಲಿ ಪೌಷ್ಟಿಕತೆಯ ನಿರ್ವಹಣೆ ತರಬೇತಿಯನ್ನು ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯಕ್ರಮದಲ್ಲಿ ಕೆವಿಕೆಯ ಪಶು ವಿಜ್ಞಾನಿಯಾದ ಡಾ. ರಕ್ಷಿತ್ ರಾಜ್.ಯು. ಎಮ್. ರವರು ಹಸುಗಳಲ್ಲಿ ಪೌಷ್ಟಿಕಾಂಶ ನಿರ್ವಹಣೆ ಹಾಗೂ ಅಧಿಕ ಹಾಲು ಪಡೆಯಲು ಅನುಸರಿಸುವ ಕ್ರಮಗಳ ಕುರಿತು ಮಾಹಿತಿ ನೀಡಿದರು. ಈ ತರಬೇತಿಯಲ್ಲಿ ೨೫ಕ್ಕೂ ಹೆಚ್ಚು ಜನರು ಭಾಗವಹಿಸಿದ್ದರು.


ಮೆಣಸಿನಕಾಯಿ ಬೆಳೆಯ ಹೊಸ ತಳಿಗಳ ತರಬೇತಿ

ಮೈಸೂರು ತಾಲೂಕಿನ ಚಿಕ್ಕಕಾನ್ಯ ಗ್ರಾಮದಲ್ಲಿ ದಿನಾಂಕ ೧೧.೦೮.೨೦೨೨ ರಂದು ಸುತ್ತೂರಿನ ಐಸಿಎಆರ್ ಜೆಎಸ್ಎಸ್ ಕೃಷಿ ವಿಜ್ಞಾನ ಕೇಂದ್ರ ವತಿಯಿಂದ ಮೆಣಸಿನಕಾಯಿ ಬೆಳೆಯ ಹೊಸ ತಳಿಗಳ ಕುರಿತು ತರಬೇತಿ ಕಾರ್ಯಕ್ರಮ ನಡೆಯಿತು, ತರಬೇತಿ ಕಾರ್ಯಕ್ರಮದಲ್ಲಿ ಕೇಂದ್ರದ ತೋಟಗಾರಿಕೆ ವಿಜ್ಞಾನಿಯಾದ ಡಾ ವಿನಯ್ ಜಿ ಎಂ ಮಾತನಾಡಿ ಮೆಣಸಿನಕಾಯಿ ಬೆಳೆಯ ಸುಧಾರಿತ ಬೇಸಾಯ ಕ್ರಮಗಳ ಬಗ್ಗೆ ಸಂಪೂರ್ಣವಾಗಿ ವಿವರಿಸಿದರು ಹಾಗೂ ತರಕಾರಿ ಬೆಳೆಯಲ್ಲಿ ತರಕಾರಿ ಸಮೃದ್ಧಿ, ನ್ಯಾನೋ ಯೂರಿಯಾ ಹಾಗೂ ಅರ್ಕ ಮೈಕ್ರೊಬಿಯಲ್ ಮಿಶ್ರಣವನ್ನೂ ಉಪಯೋಗಿಸಿಕೊಂಡು ಹಿಳುವರಿ ಹೆಚ್ಚಿಸುವ ಕ್ರಮಗಳನ್ನು ತಿಳಿಸಿದಿರು, ನಂತರ ಬೆಂಗಳೂರಿನ ಐಐಹೆಚ್‌ಆರ್ ಸಂಸ್ಥೆಯಿAದ ಬಿಡುಗಡೆಯಾಗಿರುವ ಮೆಣಸಿನಕಾಯಿ ತಳಿ ಅರ್ಕ ಹರಿತ ಬಗ್ಗೆ ವಿವರಿಸುತ್ತಾ, ಈ ತಳಿಯು ಮುಟುರು ರೋಗದ ತಡೆಯುವ ಶಕ್ತಿ ಹೊಂದಿದ್ದು ಎಕರೆಗೆ ಸುಮಾರು ೧೦-೧೫ ಟನ್ ಇಳುವರಿ ಬರುತ್ತದೆ ಎಂದು ಮಾಹಿತಿ ನೀಡಿದರು. ಗ್ರಾಮದ ಸುಮಾರು ೩೦ ಜನ ರೈತರು ಭಾಗವಹಿಸಿ ತರಬೇತಿ ಉಪಯೋಗ ಪಡೆದುಕೊಂಡರು. ಈ ಬೆಳೆಯನ್ನು ಬೆಳೆಯಲು ಆಸಕ್ತಿವಹಿಸಿದ ೧೦ ಜನ ರೈತರಿಗೆ ಅರ್ಕ ಹರಿತ ತಳಿಯ ಮೇನಸಿನಕಾಯಿ ಬೀಜಗಳನ್ನು ಹಾಗೂ ತರಕಾರಿ ಸಮೃದ್ಧಿಯನ್ನು ಮುಂಚೂಣಿ ಪ್ರಾತ್ಯಕ್ಷಿಕೆ ಕಾರ್ಯಕ್ರಮದಡಿಯಲ್ಲಿ ವಿತರಿಸಿದರು.


ಸ್ವಾತಂತ್ರೋತ್ಸವ ದಿನಾಚರಣೆ

ಸುತ್ತೂರಿನ ಐಸಿಎಆರ್ ಜೆಎಸ್ಎಸ್ ಕೃಷಿ ವಿಜ್ಞಾನ ಕೇಂದ್ರದ ಅವರಣದಲ್ಲಿ ಸ್ವತಂತ್ರ ದಿನಾಚರಣೆಯನ್ನು ತ್ರಿವರ್ಣ ಧ್ವಜವನ್ನು ಹಾರಿಸುವುದರ ಮೂಲಕ ಆಚರಿಸಲಾಯಿತು. ಸಮಾರಂಭದಲ್ಲಿ ಬಿಳಿಗೆರೆ ಗ್ರಾಮದ ಪ್ರಗತಿಪರ ರೈತರಾದ ಶ್ರೀ ಗುರುಲಿಂಗೇಗೌಡರು ಧ್ವಜಾರೋಹಣವನ್ನು ನೇರವೇರಿಸಿ ಮಾತನಾಡುತ್ತ, ದೇಶಕ್ಕೆ ಸ್ವಾತಂತ್ರ ಬಂದು ೭೫ ವರ್ಷಗಳಾಗಿದ್ದು, ಜಾಗತಿಕ ಮಟ್ಟದಲ್ಲಿ ದೇಶವು ಎಲ್ಲಾ ರಂಗಗಳಲ್ಲೂ ಸಾಧನೆಯನ್ನು ಮಾಡುತ್ತಲಿದೆ. ಕೃಷಿ ಕ್ಷೇತ್ರದಲ್ಲಿ ದೇಶವು ಗಣನೀಯ ಪ್ರಗತಿಯನ್ನು ಸಾಧಿಸಿದೆ ಎಂದರು. ರೈತರು ಆಧುನಿಕ ಕೃಷಿ ಪದ್ಧತಿಗಳನ್ನು ಅಳವಡಿಸಿಕೊಂಡು ಆರ್ಥಿಕವಾಗಿ ಸ್ವಾಲಂಬಿಯಾಗುವತ್ತ ಮುನ್ನಡೆಯಬೇಕೆಂದು ಕರೆ ನೀಡಿದರು. ಕೃಷಿ ವಿಜ್ಞಾನ ಕೇಂದ್ರದ ಸಿಬ್ಬಂದಿಗಳು ಭಾಗವಹಿಸಿದ್ದರು.


ಟೊಮ್ಯಾಟೊ ಬೆಳೆಯ ಹೊಸ ತಳಿಗಳ ಕುರಿತು ತರಬೇತಿ

ನಂಜನಗೂಡು ತಾಲೂಕಿನ ಹರತಲೆ ಗ್ರಾಮದಲ್ಲಿ ದಿನಾಂಕ ೧೬.೦೮.೨೦೨೨ ರಂದು ಸುತ್ತೂರಿನ ಐಸಿಎಆರ್ ಜೆಎಸ್ಎಸ್ ಕೃಷಿ ವಿಜ್ಞಾನಕೇಂದ್ರ ವತಿಯಿಂದ ಟೊಮ್ಯಾಟೊ ಬೆಳೆಯ ಹೊಸ ತಳಿಗಳ ಕುರಿತು ತರಬೇತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ತರಬೇತಿ ಕಾರ್ಯಕ್ರಮದಲ್ಲಿ ಕೇಂದ್ರದ ತೋಟಗಾರಿಕೆ ವಿಜ್ಞಾನಿಯಾದ ಡಾ. ವಿನಯ್ ಜಿ.ಎಂ. ಮಾತನಾಡಿ ಟೊಮೇಟೊ ಬೆಳೆಯ ಸುಧಾರಿತ ಬೇಸಾಯ ಕ್ರಮಗಳ ಬಗ್ಗೆ ಮಾಹಿತಿ ನೀಡಿದರು. ಟೊಮೇಟೊ ತಳಿ ಅರ್ಕ ಅಭೇದ ತಳಿಯು ವೈರಸ್ನಿಂದ ಬರುವ ಎಲೆ ಮುಟುರು ರೋಗ ಮತ್ತು ಅಂಗಮಾರಿ ರೋಗವನ್ನು ತಡೆಯುವ ಶಕ್ತಿ ಹೊಂದಿದೆ. ಅರ್ಕಾ ಅಭೇದ ತಳಿಯು ಎಕರೆಗೆ ಸುಮಾರು ೨೦ ರಿಂದ ೨೫ ಟನ್ ಇಳುವರಿ ಬರುತ್ತದೆ ಎಂದು ಮಾಹಿತಿ ನೀಡಿದರು. ಕೇಂದ್ರದ ಮಣ್ಣು ವಿಜ್ಞಾನಿ ಜೆ.ಜಿ. ರಾಜಣ್ಣರವರು ಮಣ್ಣಿನ ರಕ್ಷಣೆ ಹಾಗೂ ಪೋಷಕಾಂಶಗಳ ನಿರ್ವಹಣೆ ಕುರಿತು ಮಾಹಿತಿ ನೀಡಿದರು. ಈ ಹೊಸ ತಳಿಯ ಬೆಳೆಯನ್ನು ಬೆಳೆಯಲು ಮುಂದೆ ಬಂದ ೧೦ ಜನ ರೈತರಿಗೆ ಅರ್ಕ ಅಭೇದ ತಳಿಯ ಸಸಿಗಳನ್ನು ಹಾಗೂ ತರಕಾರಿ ಸಮೃದ್ಧಿಯನ್ನು ವಿತರಿಸಲಾಯಿತು. ಈ ಕಾರ್ಯಕ್ರಮದಲ್ಲಿ ಹರತಲೆ ಗ್ರಾಮದ ೩೫ ರೈತರು ಭಾಗವಹಿಸಿ ಉಪಯೋಗ ಪಡೆದುಕೊಂಡರು.


ಅಂಗನವಾಡಿ ಕಾರ್ಯಕರ್ತೆಯರಿಗೆ ತರಬೇತಿ

ದಿನಾಂಕ ೧೭ ಆಗಸ್ಟ್ ೨೦೨೨ ರಂದು ಸುತ್ತೂರಿನ ಜೆಎಸ್ಎಸ್ ಕೃಷಿ ವಿಜ್ಞಾನ ಕೇಂದ್ರದ ವತಿಯಿಂದಅಂಗನವಾಡಿ ಕಾರ್ಯಕರ್ತೆಯರಿಗೆ ಸಮತೋಲನ ಆಹಾರ ಹಾಗೂ ಮಕ್ಕಳಿಗೆ ಪೂರಕ ಆಹಾರ ತಯಾರಿಕೆ ಹಾಗೂ ಪೂರಕ ಆಹಾರಗಳಿಂದ ಪೋಷಣೆ ಕುರಿತಾದ ತರಬೇತಿಯನ್ನು ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಕೆವಿಕೆಯ ಪ್ರಭಾರ ಹಿರಿಯ ವಿಜ್ಞಾನಿ ಹಾಗೂ ಮುಖ್ಯಸ್ಥರಾದ ಶ್ರೀಮತಿ ದಿವ್ಯಾ ಹೆಚ್.ವಿ. ಯವರು ತರಬೇತಿಯಲ್ಲಿ ಕಲಿತ ವಿಷಯಗಳನ್ನು ಅಳವಡಿಸಿ ಕೊಂಡು ಪೋಷಣಾ ಮಟ್ಟವನ್ನು ಹೆಚ್ಚಿಸಿಕೊಳ್ಳಬೇಕೆಂದು ತಿಳಿಸಿದರು. ಜೆಎಸ್ಎಸ್ ಕೆವಿಕೆಯ ಗೃಹ ವಿಜ್ಞಾನಿ ಶ್ರೀಮತಿ ನೇತ್ರಾವತಿ ಎತ್ತಿನಮನಿಯವರು ಸಮತೋಲನ ಆಹಾರದ ಗಂಪುಗಳು, ಮಕ್ಕಳಿಗೆ ಪೂರಕ ಆಹಾರವನ್ನು ತಯಾರಿಸುವುದರ ಬಗ್ಗೆ ಹಾಗೂ ವಿವಿಧ ಆಹಾರಗಳಿಂದ ಪೋಷಣಾ ಮಟ್ಟವನ್ನು ಹೆಚ್ಚಿಸಿಕೊಳ್ಳುವ ಬಗ್ಗೆ ಮಾಹಿತಿ ನೀಡಿದರು.


ಪಾರ್ಥೇನಿಯಂ ನಿರ್ಮೂಲನಾ ಸಪ್ತಾಹ

ಐಸಿಎಆರ್ ಜೆಎಸ್ಎಸ್ ಕೃಷಿ ವಿಜ್ಞಾನ ಕೇಂದ್ರದಲ್ಲಿ ಪಾರ್ಥೇನಿಯಂ ನಿರ್ಮೂಲನಾ ಸಪ್ತಾಹವನ್ನು ದಿನಾಂಕ ೧೬-೨೨ ಆಗಸ್ಟ್ ೨೦೨೨ ರಂದು ಆಚರಿಸಲಾಯಿತು. ಸದರಿ ಸಪ್ತಾಹದಲ್ಲಿ ಕೆವಿಕೆ ಭೇಟಿ ನೀಡುವ ರೈತರಿಗೆ ಹಾಗೂ ಅಂಗನವಾಡಿ ಕಾರ್ಯಕರ್ತರಿಗೆ ಪಾರ್ಥೇನಿಯಂ ಕಳೆ ಹಾಗೂ ಅದರ ದುಷ್ಪರಿಣಾಮಗಳ ಕುರಿತು ತರಬೇತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ರೈತರಿಗೆ ತಮ್ಮ ಜಮೀನಿನಲ್ಲಿ ಬೇರೆ ಕಳೆಯೊಂದಿಗೆ ಪಾರ್ಥೇನಿಯಂ ಕಳೆ ಸೇರಿಸಿ ಕಾಂಪೋಸ್ಟ್ ಗೊಬ್ಬರ ತಯಾರಿಕೆ ಕುರಿತು ಮಾಹಿತಿ ನೀಡಲಾಯಿತು. ರೈತರು, ಅಂಗನವಾಡಿ ಕಾರ್ಯಕರ್ತರು ಹಾಗೂ ಕೆವಿಕೆಯ ಸಿಬ್ಬಂದಿವರ್ಗದವರು ಕೆವಿಕೆಯ ಅವರಣದಲ್ಲಿರುವ ಪಾರ್ಥೇನಿಯಂ ಕಳೆ ತೆಗೆದು ಸ್ವಚ್ಚಗೊಳಿಸಿದರು.


ನೈಸರ್ಗಿಕ ಕೃಷಿ ತರಬೇತಿ

ಐಸಿಎಆರ್ ಜೆಎಸ್ಎಸ್ ಕೃಷಿ ವಿಜ್ಞಾನ ಕೇಂದ್ರದ ವತಿಯಿಂದ ನೈಸರ್ಗಿಕ ಕೃಷಿ ಕುರಿತು ಅನ್ಲೈನ್ ತರಬೇತಿಯನ್ನು ದಿನಾಂಕ ೨೩.೦೮.೨೦೨೨ ರಂದು ಹಮ್ಮಿಕೊಳ್ಳಲಾಗಿತ್ತು. ತರಬೇತಿ ಕಾರ್ಯಕ್ರಮದಲ್ಲಿ ಕೇಂದ್ರದ ತೋಟಗಾರಿಕೆ ವಿಜ್ಞಾನಿಯಾದ ಡಾ. ಜಿ.ಎಂ. ವಿನಯ್ ಮಾತನಾಡಿ ತಮ್ಮದೇ ಜಮೀನಿನಲ್ಲಿ ಸ್ಥಳೀಯವಾಗಿ ದೊರಕುವ ತ್ಯಾಜ್ಯಗಳಿಂದ ಹಾಗೂ ದೇಸಿ ಹಸುವಿನ ಸಗಣಿ ಮತ್ತು ಗಂಜಲದಿಂದ ಪರಿಕರಗಳನ್ನು ತಯಾರಿಸಿ ಕೃಷಿ ಮಾಡುವುದು ಎಂದು ಮಾಹಿತಿ ನೀಡಿದರು. ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿಯಾದ ಚಿಕ್ಕಮಗಳೂರು ಜಿಲ್ಲೆ ಮುಗತಿಹಳ್ಳಿಯ ಚಂದ್ರಶೇಖರ್ರವರು ಮಾತನಾಡುತ್ತಾ, ನಾವು ಗೋ ಆಧಾರಿತ ಕೃಷಿ ಅಥವಾ ನೈಸರ್ಗಿಕ ಕೃಷಿ ಅಳವಡಿಸಿಕೊಂಡು, ಅದರಲ್ಲಿ ಬರುವ ನಾಲ್ಕು ತತ್ವಗಳನ್ನು ಬಳಸಿ ಅಂದರೆ ಬೀಜಮೃತ, ಜೀವಾಮೃತ, ಹೊದಿಕೆ ಮತ್ತು ವಾಫಸಾ, ಇವುಗಳನ್ನು ಸಂಪೂರ್ಣವಾಗಿ ಅಳವಡಿಸಿಕೊಂಡು ಕೃಷಿ ಮಾಡಿದ್ದೇ ಆದಲ್ಲಿ ಕಡಿಮೆ ಖರ್ಚಿನಲ್ಲಿ ಯಾವುದೇ ಮಣ್ಣಿನಲ್ಲಿಯಾದರೂ ನಾವು ಉತ್ತಮ ಇಳುವರಿ ಪಡೆದುಕೊಳ್ಳಬಹುದು ಎಂದು ಮಾಹಿತಿ ನೀಡಿದರು. ಈ ಕಾರ್ಯಕ್ರಮದಲ್ಲಿ ರಾಜ್ಯದ ಬೇರೆ ಬೇರೆ ಜಿಲ್ಲೆಯ ೫೫ ಆಸಕ್ತ ರೈತರು, ಸಿಬ್ಬಂದಿ ವರ್ಗದವರು ಭಾಗವಹಿಸಿದ್ದರು.


ಅತ್ಯುತ್ತಮ ಉದ್ಯಮಿ ಪ್ರಶಸ್ತಿ

ಪ್ರದಾನ ಮಂತ್ರಿಗಳ ಸಣ್ಣ ಹಾಗೂ ಕಿರು ಉದ್ಯಮದಡಿ ಫಲಾನುಭವಿಯಾಗಿ ಆಯ್ಕೆಯಾಗಿ ಮೈಸೂರು ಜಿಲ್ಲೆಯ ಹುಣಸೂರು ತಾಲ್ಲೂಕಿನ ರತ್ನಪುರಿ ಗ್ರಾಮದಲ್ಲಿ ಆಹಾರ ಸಂಸ್ಕರಣಾ ಘಟಕವನ್ನು ಸ್ಥಾಪನೆ ಮಾಡಿರುವ ಶ್ರೀ ನವೀನ್ಕುಮಾರ್ಎಚ್.ಎಮ್. ರವರು ದಿನಾಂಕ ೨೦ ಆಗಸ್ಟ್ ೨೦೨೨ ರಂದು ತಮಿಳುನಾಡಿನ ತಿರುಚಿರಾಪಳ್ಳಿಯ ರಾಷ್ಟ್ರೀಯ ಬಾಳೆ ಸಂಶೋಧನಾ ಕೇಂದ್ರದಿಂದ ಅತ್ಯತ್ತಮ ಉದ್ಯಮಿ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ. ಜೆಎಸ್ಎಸ್ ಕೃಷಿ ವಿಜ್ಞಾನಕೇಂದ್ರದೊಂದಿಗೆ ಸಂಪರ್ಕ ಹೊಂದಿರುವ ಇವರು ಬಾಳೆ ಕಾಯಿ ಪುಡಿ ಹಾಗೂ ಅದರಿಂದ ಮೌಲ್ಯವರ್ಧೀತ ಉತ್ಪನ್ನಗಳನ್ನು ತಯಾರಿಸಿ ತಮ್ಮದೇ ವೆಬ್ ಸೈಟ್ ನಲ್ಲಿಆನ್ ಲೈನ್ ಮಾರಾಟ ಹಾಗೂ ನೇರ ಮಾರುಕಟ್ಟೆ ವ್ಯವಸ್ಥೆಯನ್ನು ಕಲ್ಪಿಸಿಕೊಂಡಿದ್ದಾರೆ.


ಗ್ರಾಮೀಣ ಅನುಭವ ತರಬೇತಿಯಡಿಯಲ್ಲಿ ಕೆವಿಕೆಗೆ ಕೃಷಿ ವಿದ್ಯಾರ್ಥಿಗಳ ಭೇಟಿ

ಗ್ರಾಮೀಣ ಅನುಭವ ತರಬೇತಿಯಡಿಯಲ್ಲಿ ಸುತ್ತೂರಿನ ಐಸಿಎಆರ್ ಜೆಎಸ್ಎಸ್ ಕೃಷಿ ವಿಜ್ಞಾನ ಕೇಂದ್ರಕ್ಕೆ ದಿನಾಂಕ ೨೨ ಆಗಸ್ಟ್ ೨೦೨೨ ರಿಂದ ೩ ಸೆಪ್ಟೆಂಬರ್ ೨೦೨೨ ರವರೆಗೆ ಮೂಡಿಗೆರೆಯ ತೋಟಗಾರಿಕೆ ಮಹಾವಿದ್ಯಾಲಯ ದಿಂದ ಐದು ವಿದ್ಯಾರ್ಥಿಗಳು ಹಾಗೂ ದಿನಾಂಕ ೨೬ ಆಗಸ್ಟ್ ೨೦೨೨ ರಿಂದ ೨೪ ಅಕ್ಟೋಬರ್ ೨೦೨೨ ರವರೆಗೆ ಉತ್ತರ ಪ್ರದೇಶದ ನೊಯಿಡಾ ಅಂತಾರಾಷ್ಟ್ರೀಯ ವಿಶ್ವವಿದ್ಯಾಲಯ ದಿಂದ ಏಳು ವಿದ್ಯಾರ್ಥಿಗಳು ಭೇಟಿ ನೀಡಿದ್ದು, ಕೃಷಿ ವಿಜ್ಞಾನ ಕೇಂದ್ರದ ಚಟುವಟಿಕೆಗಳ ಬಗ್ಗೆ ಮಾಹಿತಿ ಪಡೆಯಲಿದ್ದಾರೆ.


------------------------------------------------------
ರೇಷ್ಮೆಗೂಡಿನಕರಕುಶಲ ವಸ್ತುಗಳ ತರಬೇತಿ

ದಿನಾಂಕ 5 ಮತ್ತು 6 ಸೆಪ್ಟೆಂಬರ್ ೨೦೨೨ ರಂದು ಸುತ್ತೂರಿನ ಐಸಿಎಆರ್ ಜೆಎಸ್ಎಸ್ ಕೃಷಿ ವಿಜ್ಞಾನ ಕೇಂದ್ರ, ಚಾಮರಾಜನಗರದ ಕೃಷಿ ವಿಜ್ಞಾನ ಕೇಂದ್ರ, ರೋಟರಿ ಮೈಸೂರು ಬೃಂದಾವನ ಹಾಗೂ ಧಾನ್ ಫೌಂಡೇಷನ್ ಸಹಯೋಗದಲ್ಲಿ ಸುತ್ತೂರಿನ ಜೆಎಸ್ಎಸ್ ಕೆವಿಕೆಯಲ್ಲಿ ೨ ದಿನಗಳ ರೇಷ್ಮೆಗೂಡಿನ ಕರಕುಶಲ ವಸ್ತುಗಳ ತರಬೇತಿಯನ್ನು ಹಮ್ಮಿಕೊಳ್ಳಲಾಗಿತ್ತು. ಉದ್ಘಾಟನಾ ಕಾರ್ಯಕ್ರಮದಲ್ಲಿ ರೋಟರಿ ಸಂಸ್ಥೆಯ ಉಪಾಧ್ಯಕ್ಷರಾದ ಶ್ರೀ ಧರ್ಮಾನಂದನವರು ಮಹಿಳೆಯರು ತರಬೇತಿ ನಂತರ ರೇಷ್ಮೆಗೂಡಿ ನಿಂದ ಕರಕುಶಲ ವಸ್ತುಗಳನ್ನು ತಯಾರಿಸಿದರೆ ಮಾರುಕಟ್ಟೆಗೆ ಸಹಾಯ ಮಾಡುವುದಾಗಿ ತಿಳಿಸಿದರು. ಸಂಪನ್ಮೂಲ ವ್ಯಕ್ತಿಗಳಾದ ಪ್ರೋ. ಎಂ. ವಿಜಯೇಂದ್ರ, ಚಾಮರಾಜನಗರ ಕೆವಿಕೆಯ ರೇಷ್ಮೆ ವಿಜ್ಞಾನಿ ಡಾ. ಚಂದ್ರಶೇಖರ್ ಕಳ್ಳಿಮನಿಯವರು ಈ ತರಬೇತಿ ಪಡೆದ ನಂತರ ಉತ್ಪನ್ನಗಳನ್ನು ತಯಾರಿಸಲು ಮುಂದೆ ಬರುವ ಮಹಿಳೆಯರಿಗೆ ರೇಷ್ಮೆಇಲಾಖೆಯಿಂದ ಶೇ.೯೦ ರಷ್ಟು ಸಬ್ಸಿಡಿದರದಲ್ಲಿ ೫ ಕೆಜಿ ಗೂಡುಗಳನ್ನು ನೀಡುವ ವ್ಯವಸ್ಥೆಯಿದ್ದು, ಮಹಿಳೆಯರು ಇದರ ಸದುಪಯೋಗಪಡಿಸಿಕೊಳ್ಳಬೇಕೆಂದು ತಿಳಿಸಿದರು. ಜೆಎಸ್ಎಸ್ಕೆವಿಕೆಯ ಪ್ರಭಾರ ಹಿರಿಯ ವಿಜ್ಞಾನಿ ಹಾಗೂ ಮುಖ್ಯಸ್ಥರಾದ ಶ್ರೀಮತಿ ದಿವ್ಯಾ ಹೆಚ್.ವಿ.ಯವರು ಆಸಕ್ತ ಮಹಿಳೆಯರಿಗೆ ಕರಕುಶಲ ವಸ್ತುಗಳನ್ನು ತಯಾರಿಸಲು ವಾರದಲ್ಲಿಒಂದು ದಿನ ಜೆಎಸ್ಎಸ್ಕೆವಿಕೆಯಲ್ಲಿ ಸ್ಥಳದ ಅವಕಾಶ ನೀಡಲಾಗುವುದು, ಉತ್ಪನ್ನಗಳನ್ನು ತಯಾರಿಸಿದರೆ ಕೆವಿಕೆ ವತಿಯಿಂದ ಖರೀದಿ ಮಾಡಲಾಗುವುದು ಎಂದು ತಿಳಸಿರು. ಚಿಂತಾಮಣಿಯ ರೇಷ್ಮೆ ಕೃಷಿ ಮಹಾವಿದ್ಯಾಲಯದ ನಿವೃತ್ತ ಪ್ರಾಧ್ಯಾಪಕರಾದ ಪ್ರೊ ಎಂ. ವಿಜಯೇಂದ್ರ ಹಾಗೂ ಸಹಾಯಕಿ ಶ್ರೀಮತಿ ರಾಜಶ್ರೀ ಯವರು ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ರೇಷ್ಮೆಗೂಡನಿಂದ ಹಾರ, ಬೊಕ್ಕೆ, ಕುಂಡಗಳು ಹಾಗೂ ಇತರೆ ಅಲಂಕಾರಿಕ ವಸ್ತುಗಳ ತಯಾರಿಕೆ ಬಗ್ಗೆ ಪ್ರಾತ್ಯಕ್ಷಿಕೆ ಮೂಲಕ ತೋರಿಸಿಕೊಟ್ಟರು. ತರಬೇತಿಯಲ್ಲಿ ೨೫ ಮಹಿಳೆಯರು ಭಾಗವಹಿಸಿ ತರಬೇತಿಯ ಪ್ರಯೋಜನ ಪಡೆದುಕೊಂಡರು. ತರಬೇತಿಯಲ್ಲಿ ಭಾಗವಹಿಸಿದ ಶಿಬಿರಾರ್ಥಿಗಳಿಗೆ ಪ್ರಮಾಣ ಪತ್ರವನ್ನು ವಿತರಿಸಲಾಯಿತು.


ಸುತ್ತೂರಿನ ಜೆಎಸ್ಎಸ್ ಶಾಲೆಯಲ್ಲಿ ಪೋಷಣ್ ಅಭಿಯಾನ

ಪೋಷನ್ ಅಭಿಯಾನದ ಪ್ರಯುಕ್ತ ದಿನಾಂಕ 15ನೆಯ ಸೆಪ್ಟೆಂಬರ್ 2022 ರಂದು ಸುತ್ತೂರಿನ ಜೆಎಸ್ಎಸ್ ಶಾಲೆ, ಸುತ್ತೂರು ವಿದ್ಯಾರ್ಥಿಗಳಿಗೆ ಪೋಷಕಾಂಶಗಳ ಮಹತ್ವ, ಸಮತೋಲನ ಆಹಾರದ ಗುಂಪುಗಳು, ಹಣ್ಣು ಮತ್ತು ತರಕಾರಿಗಳ ಮಹತ್ವ ಹಾಗೂ ಸಿರಿಧಾನ್ಯಗಳಲ್ಲಿರುವ ಪೋಷಕಾಂಶಗಳು ಹಾಗೂ ಸಿರಿಧಾನ್ಯಗಳ ಬಳಕೆ ಕುರಿತು ಮಾಹಿತಿಯನ್ನು ಕೆವಿಕೆಯ ಗೃಹ ವಿಜ್ಞಾನಿಯಾದ ಶ್ರೀಮತಿ ನೇತ್ರಾವತಿ ಎತ್ತಿನಮನಿಯವರು ತಿಳಿಸಿದರು. ಸದರಿ ತರಬೇತಿಯಲ್ಲಿ 50 ವಿದ್ಯಾರ್ಥಿಗಳು ಭಾಗವಹಿಸಿದ್ದರು.


ಜಲಾನಯನ ಪ್ರದೇಶದಲ್ಲಿ ಸುಸ್ಥಿರ ಕೃಷಿಗಾಗಿ ಪಂಚಸೂತ್ರಗಳು ಕುರಿತ ತರಬೇತಿ

ಸುತ್ತೂರಿನ ಐಸಿಎಆರ್ ಜೆಎಸ್ಎಸ್ ಕೃಷಿ ವಿಜ್ಞಾನ ಕೇಂದ್ರ ಹಾಗೂ ಹುಣಸೂರಿನ ಭೈಫ್ ಸಂಸ್ಥೆಯ ಸಹಯೋಗದೊಂದಿಗೆ ದಿನಾಂಕ 12 ಮತ್ತು 14 ಸೆಪ್ಟೆಂಬರ್ 2022 ರಂದು “ಜಲಾನಯನ ಪ್ರದೇಶದಲ್ಲಿ ಸುಸ್ಥಿರ ಕೃಷಿಗಾಗಿ ಪಂಚಸೂತ್ರಗಳು” ಕುರಿತಾದ ೨ ದಿನಗಳ ತರಬೇತಿಯನ್ನು ಹಮ್ಮಿಕೊಳ್ಳಲಾಯಿತು. ತರಬೇತಿ ಕಾರ್ಯಕ್ರಮದಲ್ಲಿ ಹುಣಸೂರು ತಾಲ್ಲೂಕಿನ 60 ರೈತ ಹಾಗೂ ರೈತ ಮಹಿಳೆಯರು ಭಾಗವಹಿಸಿದ್ದರು. ಕೇಂದ್ರದ ಬೇಸಾಯಶಾಸ್ತçದ ವಿಜ್ಞಾನಿಯಾದ ಶ್ರೀ ಶಾಮರಾಜ್ ರವರು ಜಲಾನಯನ ಪ್ರದೇಶದ ಅಭಿವೃದ್ಧಿ ಹಾಗೂ ಮಳೆಯಾಶ್ರಿತ ಪ್ರದೇಶದಲ್ಲಿ ಸುಧಾರಿತ ಬೇಸಾಯ ಕ್ರಮಗಳ ಕುರಿತು ತಾಂತ್ರಿಕ ಮಾಹಿತಿ ನೀಡಿದರು. ಭೂಮಿಯ ಮೇಲ್ಪದರ ಮಣ್ಣು ನಿರ್ಮಾಣವಾಗಲು ಸಾವಿರಾರು ವರ್ಷಗಳು ಬೇಕಾಗುತ್ತದೆ. ಆದಕಾರಣ ಈಗ ನಿರ್ಮಾಣವಾಗಿರುವ ಮಣ್ಣಿನ ಸವಕಳಿಯನ್ನು ತಡೆಯಲು ಇಳಿಜಾರು ಪ್ರದೇಶಗಳಿಗೆ ಅಡ್ಡಲಾಗಿ ಇಂಗು ಗುಂಡಿಗಳ ನಿರ್ಮಾಣ, ಕಾಂಟೂರ್ ಬದುಗಳ ನಿರ್ಮಾಣ ಮಾಡಬೇಕೆಂದು ತಿಳಿಸಿದರು. ಉತ್ತಮ ಬೀಜದ ಆಯ್ಕೆ ಹಾಗೂ ಬೀಜ ಸಂಗ್ರಹಣೆಯನ್ನು ಕೃಷಿಯಲ್ಲಿ ಅಳವಡಿಸಿಕೊಳ್ಳಬೇಕೆಂದರು. ಕೃಷಿ ಕಾರ್ಮಿಕರ ಕೊರತೆಯ ಕಡೆ ಕೃಷಿ ಯಾಂತ್ರಿಕತೆಯನ್ನು ಅಳವಡಿಸಿಕೊಳ್ಳಲು ಕರೆ ನೀಡಿದರು. ರೈತರು ಹಾಗೂ ರೈತ ಮಹಿಳೆಯರು ಕೆವಿಕೆಯ ಪ್ರಾತ್ಯಕ್ಷಿಕಾ ಘಟಕಳು, ಗೋಶಾಲೆ, ಅರ್ಧ ಎಕರೆಯಲ್ಲಿ ನಿರ್ಮಿಸಲಾದ ಸಮಗ್ರ ತೋಟಗಾರಿಕೆ ಪದ್ಧತಿ ಹಾಗೂ ಜೀವಾಮೃತ ತಯಾರಿಕೆ ಘಟಕಗಳಿಗೆ ಭೇಟಿ ನೀಡಿ ಮಾಹಿತಿ ಪಡೆದರು. ತರಬೇತಿ ಕಾರ್ಯಕ್ರಮದಲ್ಲಿ ಕೆವಿಕೆಯ ಸಿಬ್ಬಂದಿವರ್ಗದವರು ಹಾಗೂ ಬೈಫ್ ಸಿಬ್ಬಂದಿವರ್ಗದವರು ಭಾಗಹಿಸಿದ್ದರು.


ವಿಶ್ವತೆಂಗು ದಿನಾಚರಣೆ

ಸುತ್ತೂರಿನ ಐಸಿಎಆರ್ ಜೆಎಸ್ಎಸ್ ಕೃಷಿ ವಿಜ್ಞಾನ ಕೇಂದ್ರ, ನಿರಂತರ ಸೈಂಟಿಫಿಕ್ ಸೊಲ್ಯುಷನ್ಸ್ ಹಾಗು ಕೃಷಿ ತಂತ್ರಜ್ಞರ ಸಂಸ್ಥೆ ಮೈಸೂರುಇವರ ಸಂಯುಕ್ತಆಶ್ರಯದಲ್ಲಿ ವಿಶ್ವ ತೆಂಗು ದಿನಾಚರಣೆ ಪ್ರಯುಕ್ತ ತೆಂಗಿನ ಬೆಳೆಯಲ್ಲಿ ಸುಧಾರಿತ ಬೇಸಾಯ ಕ್ರಮಗಳು ಹಾಗು ಮೌಲ್ಯವರ್ಧನೆ ಕುರಿತು ತರಬೇತಿ ಕಾರ್ಯಕ್ರಮವನ್ನು ಐಸಿಎಆರ್ ಜೆಎಸ್ಎಸ್ ಕೃಷಿ ವಿಜ್ಞಾನ ಕೇಂದ್ರದಲ್ಲಿ ದಿನಾಂಕ ೦೨.೦೯.೨೦೨೨ರಂದು ಆಯೋಜಿಸಲಾಗಿತ್ತು. ಕಾರ್ಯಕ್ರಮದಲ್ಲಿ ತೆಂಗು ಅಭಿವೃದ್ಧಿ ಮಂಡಳಿಯ ನಿವೃತ್ತ ನಿರ್ದೇಶಕರಾದ ಶ್ರೀ ವಿಜಯಕುಮಾರ್ ಹಳ್ಳಿಕೇರಿಯವರು ತೆಂಗಿನ ಮೌಲ್ಯವರ್ಧನೆ ಕುರಿತು ಸುದೀರ್ಘವಾಗಿ ಮಾಹಿತಿಯನ್ನು ನೀಡಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿಕೊಂಡ ಶ್ರೀ ಮಂಜುನಾಥ್ ಅಂಗಡಿ, ಹಿರಿಯ ವಿಜ್ಞಾನಿಯವರು ಮಾತನಾಡಿ ಅಡಿಕೆಗೆ ಬೆಲೆ ಏರುತ್ತಿರುವುದರಿಂದ ತೆಂಗು ಬೆಳೆಗಾರರು ಕಡಿಮೆಯಾಗುತ್ತಿದ್ದಾರೆ. ಆದರೆ ತೆಂಗು ಕಲ್ಪವೃಕ್ಷ ವಾಗಿರುವುದರಿಂದ ಸಂಪೂರ್ಣ ಅಡಿಕೆಗೆ ಹೋಗದೆ ತೆಂಗನ್ನು ಜೊತೆಗೆ ಬೆಳೆಯಲು ಕರೆ ನೀಡಿದರು. ಕೆವಿಕೆಯ ಡಾ. ವಿನಯ್ ಜಿ. ಎಂ ರವರು ತೆಂಗಿನ ಬೆಳೆಯಲ್ಲಿ ಸುಧಾರಿತ ಬೇಸಾಯ ಕ್ರಮಗಳ ಕುರಿತು ಹಾಗು ಶ್ರೀ ಜೆ. ಜಿ ರಾಜಣ್ಣ ಮಣ್ಣು ನಿರ್ವಹಣೆ ಕುರಿತು ಉಪನ್ಯಾಸ ನೀಡಿದರು. ಕಾರ್ಯಕ್ರಮದಲ್ಲಿ ಮೈಸೂರಿನ ವಾಣಿಜ್ಯ ತೆರಿಗೆ ಇಲಾಖೆಯ ನಿವೃತ್ತ ಆಯುಕ್ತರಾದ ಶ್ರೀ ಕೆ.ಎನ್. ಚಂದ್ರಶೇಖರ್, ನಿವೃತ್ತ ಜಂಟಿ ಕೃಷಿ ನಿರ್ದೇಶಕರಾದ ಡಾ. ವಿಷಕಂಠ, ಪ್ರಗತಿಪರ ರೈತರಾದ ಶ್ರೀ ರೋಹಿತ್ ೬೦ಕ್ಕೂ ಹೆಚ್ಚು ಆಸಕ್ತ ರೈತರು, ಮೂಡಿಗೆರೆ ತೋಟಗಾರಿಕಾ ಕಾಲೇಜು ಮತ್ತು ನೋಯಿಡಾ ಕೃಷಿ ಕಾಲೇಜಿನ ವಿದ್ಯಾರ್ಥಿಗಳು ಭಾಗವಹಿಸಿದ್ದರು.


ಶ್ರೀಗಂಧ ಬೆಳೆಯ ಸಮಗ್ರ ನಿರ್ವಹಣೆ ಬಗ್ಗೆ ತರಬೇತಿ

ದಿನಾಂಕ ೦೭ ಸೆಪ್ಟೆಂಬರ್ ೨೦೨೨ ರಂದುಐಸಿಎಆರ್ ಜೆಎಸ್ಎಸ್ ಕೃಷಿ ವಿಜ್ಞಾನಕೇಂದ್ರ ಸುತ್ತೂರು, ಹಾಗೂ ಮರ ವಿಜ್ಞಾನಕೇಂದ್ರ, ಬೆಂಗಳೂರು ಇವರ ಸಹಯೋಗದೊಂದಿಗೆ ಶ್ರೀಗಂಧ ಬೆಳೆಯ ಸಮಗ್ರ ನಿರ್ವಹಣೆ ಮತ್ತು ಶ್ರೀಗಂಧ ಬೆಳೆಯಧಾರಿತ ಕೃಷಿ ಅರಣ್ಯ ಪದ್ಧತಿಗಳ ಬಗ್ಗೆ ತರಬೇತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮದ ಮುಖ್ಯ ಅತಿಥಿಗಳಾದ ಡಾ. ಬಿ ಎನ್. ದಿವಾಕರ್ರವರು ಮಾತನಾಡಿ ಮರ ವಿಜ್ಞಾನ ಮತ್ತು ತಂತ್ರಜ್ಞಾನ ಸಂಸ್ಥೆ ಬೆಂಗಳೂರು ಕಾರ್ಯಕ್ರಮಗಳ ಬಗ್ಗೆ ಹಾಗೂ ಈ ಸಂಸ್ಥೆಯು ಶ್ರೀಗಂಧ ಬೆಳೆಯನ್ನು ರೈತರಿಗೆ ಉತ್ತೇಜಿಸಲು ಮಾಡುತ್ತಿರುವ ಕೆಲಸಗಳ ಬಗ್ಗೆ ಮಾಹಿತಿ ನೀಡಿದರು. ಮೈಸೂರಿನ ಜೆಎಸ್ಎಸ್ ಮಹಾವಿದ್ಯಾಪೀಠದ ತೋಟಗಾರಿಕೆ ನಿರ್ದೇಶಕರಾದ ಶ್ರೀ ಎನ್. ಎಂ. ಶಿವಶಂಕರಪ್ಪ ನವರು ಮಾತನಾಡಿ ಅರಣ್ಯ ಇಲಾಖೆಯು ರೈತರಿಗೆ ಬೆಳೆಯಲು ಸಹಾಯಧನ ನೀಡುವುದರ ಜೊತೆಗೆತಾಂತ್ರಿಕ ಮಾಹಿತಿಯನ್ನು ನೀಡುತ್ತಿದೆ. ಶ್ರೀಗಂಧ ಬೆಳೆಯನ್ನು ಬೆಳೆದರೆ ಒಳ್ಳೆಯ ಬೆಲೆ ಇರುತ್ತದೆ. ರೈತರಿಗೆ ಬ್ಯಾಂಕ್ ನಿಂದಇರುವ ಸವಲತ್ತುಗಳ ತಿಳಿದುಕೊಂಡು ಸಾಲ ಸೌಲಭ್ಯ ಪಡೆದು ಮುಂದಿನ ದಿನಗಳಲ್ಲಿ ಹೆಚ್ಚಿನ ಶ್ರೀಗಂಧದ ಕೃಷಿಯನ್ನು ಮಾಡಲುರೈತರಿಗೆಕರೆನೀಡಿದರು. ಬೆಂಗಳೂರಿನ ಮರ ವಿಜ್ಞಾನ ಮತ್ತು ತಂತ್ರಜ್ಞಾನ ಸಂಸ್ಥೆಯ ವಿಜ್ಞಾನಿಯಾದ ಡಾ. ಬಿ. ಎನ್. ದಿವಾಕರ್ ರವರು ಶ್ರೀಗಂಧದ ಇತಿಹಾಸ, ಅದರ ಉಪಯೋಗಗಳು, ಶ್ರೀಗಂಧದ ಬೆಳೆಯ ಸಮಗ್ರ ನಿರ್ವಹಣೆ ಹಾಗೂ ಅದರ ಆರ್ಥಿಕತೆ ಬಗ್ಗೆ ಮಾಹಿತಿ ನೀಡಿದರು. ಇನ್ನೋರ್ವ ವಿಜ್ಞಾನಿ ಡಾ. ದೊರೈರವರು ಶ್ರೀಗಂಧ ಸಸಿಗಳನ್ನು ಬೆಳೆಸುವ ಹಾಗೂ ನರ್ಸರಿ ಮಾಡಿ ಆದಾಯಗಳಿಸಬೇಕೆಂದು ಮಾಹಿತಿ ನೀಡಿದರು. ನಿವೃತ್ತ ಬ್ಯಾಂಕ್ ಅಧಿಕಾರಿಗಳಾದ ಶ್ರೀ ವೆಂಕಟೇಶ್ರವರುರೈತರಿಗೆ ಬ್ಯಾಂಕ್ಕಡೆಯಿAದ ಶ್ರೀಗಂಧ ಬೆಳೆಯಲು ಒಂದು ಹೆಕ್ಟೇರ್ಗೆಒಂದು ಲಕ್ಷ ಹನ್ನೆರಡು ಸಾವಿರಗಳು ದೊರೆಯುತ್ತವೆಎಂದು ತಿಳಿಸಿದರು. ಟಿ. ನರಸೀಪುರ ತಾಲೂಕಿನ ಅರಣ್ಯ ಅಧಿಕಾರಿಯಾದ ರಾಜೇಶ್ ಟಿ ಡಿ ಯವರು ರೈತರಿಗೆ ಅರಣ್ಯ ಇಲಾಖೆಯ ಕಾರ್ಯಕ್ರಮಗಳು, ಶ್ರೀಗಂಧ ಬೆಳೆಗೆ ಇಲಾಖೆ ಇಂದ ದೊರೆಯುವ ಸವಲತ್ತುಗಳು, ಒಳ್ಳೆಯ ಶ್ರೀಗಂಧ ಸಸಿಗಳ ಲಭ್ಯತೆ ಬಗ್ಗೆ ಮಾಹಿತಿ ನೀಡಿದರು. ಮೈಸೂರು ಆಕಾಶವಾಣಿಯ ಕಾರ್ಯಕ್ರಮ ನಿರ್ವಾಹಕರಾದ ಶ್ರೀ ಸುಬ್ರಹ್ಮಣ್ಯ, ಮೈಸೂರು ಅರಣ್ಯ ಸಂರಕ್ಷಣೆ ಅಧಿಕಾರಿಗಳಾದ ಶ್ರೀ ಶ್ರೀಧರ್, ಜೆಎಸ್ಎಸ್ ಕೆವಿಕೆಯ ಪ್ರಭಾರ ಹಿರಿಯ ವಿಜ್ಞಾನಿ ಹಾಗೂ ಮುಖ್ಯಸ್ಥರಾದ ಶ್ರೀಮತಿ ಹೆಚ್.ವಿ. ದಿವ್ಯಾರವರು ಹಾಗೂ ಸಿಬ್ಬಂದಿಗಳು ಭಾಗವಹಿಸಿದ್ದರು. ಡಾ. ಜಿ.ಎಂ. ವಿನಯ್ರವರುಕಾರ್ಯಕ್ರಮ ಪರಿಚಯ ಮಾಡಿಕೊಟ್ಟರು. ಕಾರ್ಯಕ್ರಮದಲ್ಲಿ ೧೦೦ಕ್ಕೂ ಹೆಚ್ಚು ರೈತರು ಭಾಗವಹಿಸಿ ಸದುಪಯೋಗ ಪಡೆದುಕೊಂಡರು.ಕಾರ್ಯಕ್ರಮದ ಕೊನೆಯಲ್ಲಿ ಅರಣ್ಯ ಇಲಾಖೆ ಸಹಯೋಗದೊಂದಿಗೆ ತರಬೇತಿ ಕಾರ್ಯಕ್ರಮಕ್ಕೆ ಬಂದ ಪ್ರತಿಯೊಬ್ಬ ರೈತರಿಗೂ ಉಚಿತವಾಗಿ ಶ್ರೀಗಂಧದ ಗಿಡವನ್ನು ವಿತರಿಸಲಾಯಿತು.


ದ್ವಿದಳ ಧಾನ್ಯಗಳ ಬೀಜೋತ್ಪಾದನೆ ಯೋಜನೆಯ ಸಲಹಾ ಸಮಿತಿ ಸಭೆ

ದಿನಾಂಕ ೦೮.೦೯.೨೦೨೨ ರಂದು ಸುತ್ತೂರಿನ ಐಸಿಎಆರ್ ಜೆಎಸ್ಎಸ್ ಕೃಷಿ ವಿಜ್ಞಾನ ಕೇಂದ್ರದಲ್ಲಿ ದ್ವಿದಳ ಧಾನ್ಯಗಳ ಬೀಜೋತ್ಪಾದನೆ ಯೋಜನೆಯ ಸಲಹಾ ಸಮಿತಿ ಸಭೆಯನ್ನು ಹಮ್ಮಿಕೊಳ್ಳಲಾಗಿತ್ತು. ಈ ಸಭೆಯಲ್ಲಿ ಕೆವಿಕೆಯ ಪ್ರಭಾರ ಹಿರಿಯ ವಿಜ್ಞಾನಿ ಹಾಗೂ ಮುಖ್ಯಸ್ಥರಾದ ಶ್ರೀಮತಿ ಹೆಚ್.ವಿ.ದಿವ್ಯಾರವರು ದ್ವಿದಳಧಾನ್ಯಗಳ ಬೀಜೋತ್ಪಾದನೆ ಯೋಜನೆಯ ಪ್ರಗತಿ ವರದಿಯನ್ನು ಮಂಡಿಸಿದರು. ಈ ಸಭೆಯಲ್ಲಿ ಜೆಎಸ್ಎಸ್ ಮಹಾವಿದ್ಯಾಪೀಠದ ಕಾರ್ಯನಿರ್ವಾಹಕ ಕಾರ್ಯದರ್ಶಿಗಳಾದ ಡಾ. ಸಿ.ಜಿ. ಬೆಟಸೂರ್ ಮಠ ತೋಟಗಾರಿಕೆ ನಿರ್ದೇಶಕರಾದ ಶ್ರೀ ಎನ್. ಎಮ್. ಶಿವಶಂಕರಪ್ಪರವರು, ಸಾಮಾನ್ಯ ಅಭಿವೃದ್ಧಿ ವಿಭಾಗದ ನಿರ್ದೇಶಕಾರದ ಶ್ರೀ ಕೆ.ಎಲ್. ರೇವಣ್ಣಸ್ವಾಮಿಯವರು, ಕೃಷಿ, ಬೀಜ ಪ್ರಮಾಣೀಕರಣ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು, ಕೆವಿಕೆಯ ಹಿರಿಯವಿಜ್ಞಾನಿ ಶ್ರೀಮಂಜುನಾಥ ಅಂಗಡಿ, ಯೋಜನೆಯ ಫಲಾನುಭವಿ ರೈತರುಗಳಾದ ಶ್ರೀಮತಿ ಸುಷ್ಮಾ, ಶ್ರೀ ಭುವನಶಂಕರ್, ಶ್ರೀ ಮಹಾದೇವಸ್ವಾಮಿ ಹಾಗೂ ಶ್ರೀ ಮನೋಜ್ಹಾಗೂ ಹಾಗೂ ಕೆವಿಕೆಯ ಸಿಬ್ಬಂದಿಯವರು ಭಾಗವಹಿಸಿದ್ದರು.


ಬಟರ್ ಫ್ರೂಟ್ ತರಬೇತಿ

ಸುತ್ತೂರಿನ ಐಸಿಎಆರ್ ಜೆಎಸ್ಎಸ್ ಕೃಷಿ ವಿಜ್ಞಾನ ಕೇಂದ್ರ ಹಾಗೂ ಚಟ್ಟಳ್ಳಿ ಭಾರತೀಯ ಕೇಂದ್ರೀಯ ಸಂಶೋದನಾ ಕೇಂದ್ರದ ಸಹಯೋಗದೊಂದಿಗೆ ದಿನಾಂಕ ೨೨.೦೯.೨೦೨೨ ರಂದು ಆನ್ ಲೈನ್ ಅಲ್ಲಿ ಬೆಣ್ಣೆ ಹಣ್ಣು ಅಥವಾ ಬಟರ್ ಫ್ರೂಟ್ ಬೇಸಾಯ ಕ್ರಮಗಳ ಬಗ್ಗೆ ತರಬೇತಿಯನ್ನು ಆಯೋಜಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿ ಕೃಷಿ ವಿಜ್ಞಾನ ಕೇಂದ್ರದ ತೋಟಗಾರಿಕಾ ವಿಜ್ಞಾನಿ ಡಾ. ವಿನಯ್ ಜಿ. ಎಂ. ರವರು ಬೆಣ್ಣೆ ಹಣ್ಣಿನ ಇತಿಹಾಸ ಹಾಗೂ ಮಹತ್ವದ ಬಗ್ಗೆ ತಿಳಿಸಿದರು. ಭಾರತೀಯ ಕೇಂದ್ರೀಯ ಸಂಶೋಧನಾ ಕೇಂದ್ರ ಚೆಟ್ಟಳಿಯ ಹಣ್ಣು ವಿಜ್ಞಾನಿ ಡಾ ಮುರಳೀಧರ ಬಿ. ಎಂ. ರವರು ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ, ಬೆಣ್ಣೆಹಣ್ಣಿನ ತಳಿಗಳು, ಸಸ್ಯೋತ್ಪದನೆ, ಮಣ್ಣು, ಹವಾಗುಣ, ನೀರು ನರ್ವಹಣೆ, ಪೋಷಕಾಂಶ ಗಳ ಬಳಕೆ, ಟ್ರೈನ್ನಿಂಗ್ ಮತ್ತು ಪ್ರುನಿಂಗ್ ಮಾಡುವ ವಿಧಾನಗಳು, ಕೀಟ ಮತ್ತು ರೋಗಗಳ ನಿಯಂತ್ರಣ ಬಗ್ಗೆ ವಿವರವಾಗಿ ಮಾಹಿತಿ ನೀಡಿದರು, ಇತ್ತೀಚಿನ ದಿನಗಳಲ್ಲಿ ಮಳೆ ಹೆಚ್ಚಾಗಿ ಬೀಳುತ್ತಿರುವ ಕಾರಣ ಬೆಣ್ಣೆ ಹಣ್ಣಿನ ಗಿಡಗಳಿಗೆ ಬುಡ ಕೊಳೆ ರೋಗ ಬರುತ್ತಿದ್ದು ಇದನ್ನು ತಪ್ಪಿಸಲು ರೈತರು ಏರು ಬದು ಗಳನ್ನು ಮಾಡಿ ನಾಟಿ ಮಾಡಬೇಕು ಹಾಗೂ ನೀರು ಬಸಿದು ಹೋಗುವಂತೆ ಮಾಡಿಕೊಳ್ಳಬೇಕೆಂದು ಸೂಚಿಸಿದರು.ಈ ತರಬೇತಿಯಲ್ಲಿ ತೋಟಾರಿಕೆ ಇಲಾಖೆ ಮೈಸೂರು, ಬಳ್ಳಾರಿ, ಹಾಸನದ ಅಧಿಕಾರಿಗಳು, ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿಗಳು, ಚಟ್ಟಳ್ಳಿ ಸಂಶೋಧನಾ ಕೇಂದ್ರದ ವಿಜ್ಞಾನಿಗಳು ಹಾಗೂ ೧೦೫ ಬೇರೆ ಬೇರೆ ಜಿಲ್ಲೆಯ ಆಸಕ್ತ ರೈತರು ಭಾಗವಹಿಸಿ ಉಪಯೋಗ ಪಡೆದುಕೊಂಡರು.


ಅತ್ಯುತ್ತಮ ಕೃಷಿ ಲೇಖನ ಪ್ರಶಸ್ತಿ

ಧಾರವಾಡದ ಕೃಷಿ ವಿಶ್ವವಿದ್ಯಾಲಯದಲ್ಲಿ ನಡೆದ ಕೃಷಿ ಮೇಳದಲ್ಲಿ ದಿನಾಂಕ 20.09.2022 ರಂದು ಸುತ್ತೂರಿನ ಐಸಿಎಆರ್ ಜೆಎಸ್ ಎಸ್ ಕೃಷಿ ವಿಜ್ಞಾನ ಕೇಂದ್ರದ ಪ್ರಭಾರ ಹಿರಿಯ ವಿಜ್ಞಾನಿ ಹಾಗೂ ಮುಖ್ಯಸ್ಥರಾದ ಶ್ರೀಮತಿ ಹೆಚ್.ವಿ. ದಿವ್ಯಾರವರಿಗೆ ಅತ್ಯುತ್ತಮ ಕೃಷಿ ಲೇಖನ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಶ್ರೀಮತಿ ಹೆಚ್. ವಿ. ದಿವ್ಯಾರವರು ದೇಸಿ ಬಿತ್ತನೆ ಬೀಜಗಳ ಸಂರಕ್ಷಕರಾದ ಪಿರಿಯಾಪಟ್ಟಣ ತಾಲ್ಲೂಕಿನ ಹಿಟ್ನೆ ಹೆಬ್ಬಾಗಿಲು ಗ್ರಾಮದ ಶ್ರೀ ಕಾಳಪ್ಪರವರ ಕುರಿತು ಬರೆದ “ದೇಸಿ ಬಿತ್ತನೆ ಬೀಜದಲ್ಲೇ ನೆಮ್ದಿ” ಎಂಬ ಲೇಖನಕ್ಕೆ ಈ ಪ್ರಶಸ್ತಿ ಲಭಿಸಿದ್ದು, ಈ ಲೇಖನವು ಪ್ರತಿಷ್ಟಿತ ಅಡಿಕೆ ಪತ್ರಿಕೆಯಲ್ಲಿ ಪ್ರಕಟವಾಗಿದೆ.


ಪೋಷಣಾ ಅಭಿಯಾನ

ದಿನಾಂಕ ೧೭ ಸೆಪ್ಟೆಂಬರ್ ೨೦೨೨ ರಂದು ಸುತ್ತೂರಿನ ಐಸಿಎಆರ್ ಜೆಎಸ್ಎಸ್ ಕೃಷಿ ವಿಜ್ಞಾನ ಕೇಂದ್ರ, ಇಫ್ಕೋ ಉಪಕ್ರಮ ಹಾಗೂ ಮೈಸೂರಿನ ಕೃಷಿ ತಂತ್ರಜ್ಞರ ಸಂಸ್ಥೆ ವತಿಯಿಂದ ಪೋಷಣಾ ಅಭಿಯಾನ ಮತ್ತು ಗಿಡ ನೆಡುವ ಕರ್ಯಕ್ರಮವನ್ನು ನಂಜನಗೂಡು ತಾಲ್ಲೂಕಿನ ಸುತ್ತೂರಿನ ಐಸಿಎಆರ್ ಜೆಎಸ್ಎಸ್ ಕೃಷಿ ವಿಜ್ಞಾನ ಕೇಂದ್ರದಲ್ಲಿ ಹಮ್ಮಿಕೊಳ್ಳಲಾಗಿತ್ತು. ಪೋಷಣಾ ಅಭಿಯಾನ ಕಾರ್ಯಕ್ರಮವನ್ನು ಉದ್ದೇಶಿಸಿ ಆನ್ಲೈನ್ ಮೂಲಕ ಮಾತನಾಡಿದ ಕೇಂದ್ರ ಕೃಷಿ ಸಚಿವರಾದ ಶ್ರೀ ನರೇಂದ್ರ ಸಿಂಗ್ ತೋಮರ್ ರವರು ಪೋಷಣ್ ಅಭಿಯಾನದ ಕುರಿತು ಮಾತನಾಡಿ, ಪೌಷ್ಟಿಕ ಆಹಾರದ ಕೊರತೆ ನೀಗಿಸುವ ನಿಟ್ಟಿನಲ್ಲಿ ೨ ಲಕ್ಷಕ್ಕೂ ಹೆಚ್ಚು ತರಕಾರಿ ಬೀಜಗಳ ಕಿಟ್ ಮತ್ತು ೮ ಲಕ್ಷಕ್ಕೂ ಅಧಿಕ ಗಿಡಗಳನ್ನು ನೆಡುವ ಮೂಲಕ ರ್ಥ ಪರ್ಣವಾಗಿ ಆಚರಿಸಲಾಗುತ್ತಿದೆ. ರೈತರು ನ್ಯಾನೋ ಯೂರಿಯಾ ಬಳಕೆ ಮಾಡಿ ಮಣ್ಣಿನ ಫಲವತ್ತತೆ ಕಾಪಾಡಬೇಕು ಮತ್ತು ಹೆಚ್ಚು ಲಾಭಗಳಿಸಬೇಕು ಎಂದು ತಿಳಿಸಿದರು. ಕರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮೈಸೂರು ಅಧ್ಯಾಯದ ಕೃಷಿ ತಂತ್ರಜ್ಞರ ಸಂಸ್ಥೆಯ ಅಧ್ಯಕ್ಷರಾದ ಡಾ. ಮಹಂತೇಶಪ್ಪ ಎಂ., ಸುತ್ತೂರಿನ ಪಶುವೈದ್ಯಾಧಿಕಾರಿಗಳಾದ ಡಾ. ನಿಖಿತ್, ಬಿಳಿಗೆರೆ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಶ್ರೀಮತಿ ರಾಜಮ್ಮ ರವರು ಉಪಸ್ಥಿತರಿದ್ದರು. ಇಫ್ಕೋ ಉಪಕ್ರಮದ ಕ್ಷೇತ್ರ ಅಧಿಕಾರಿಗಳಾದ ಶ್ರೀ ಮನೋಜ್ ರವರು ಮಾತನಾಡಿ ನ್ಯಾನೋ ಯೂರಿಯಾ ಮತ್ತು ಸಾಮಾನ್ಯ ಯೂರಿಯಾಗೆ ಇರುವ ವ್ಯತ್ಯಾಸ, ಇಳುವರಿ ಮತ್ತು ಮಣ್ಣಿನ ಫಲವತ್ತತೆ ಬಗ್ಗೆ ಮನವರಿಕೆ ಮಾಡಿಕೊಟ್ಟರು. ಜೆಎಸ್ಎಸ್ ಕೃಷಿ ವಿಜ್ಞಾನ ಕೇಂದ್ರದ ಗೃಹ ವಿಜ್ಞಾನಿಯಾದ ಶ್ರೀಮತಿ ನೇತ್ರಾವತಿ ಎತ್ತಿನಮನಿಯವರು ಪೌಷ್ಟಿಕ ಕೈತೋಟದ ಮಹತ್ವ ಸಿರಿಧಾನ್ಯಗಳ ಮಹತ್ವ ಹಾಗೂ ಬಯೋಪರ್ಟಿಪೈಡ್ ಬೆಳೆಗಳ ಬಗ್ಗೆ ಮಾಹಿತಿ ನೀಡಿದರು. ಕರ್ಯಕ್ರಮದ ಅಧ್ಯಕ್ಷ್ಯತೆ ವಹಿಸಿ ಮಾತನಾಡಿದ ಸುತ್ತೂರಿನ ಐಸಿಎಆರ್ ಜೆಎಸ್ಎಸ್ ಕೃಷಿ ವಿಜ್ಞಾನ ಕೇಂದ್ರದ ಪ್ರಭಾರ ಹಿರಿಯ ವಿಜ್ಞಾನಿಗಳು ಮತ್ತು ಮುಖ್ಯಸ್ಥರಾದ ಶ್ರೀಮತಿ ಹೆಚ್. ವಿ. ದಿವ್ಯಾ ರವರು ಮಾತನಾಡಿ ರೈತರಿಗೆ ನೀಡುತ್ತಿರುವ ತರಕಾರಿ ಮತ್ತು ಸೊಪ್ಪಿನ ಬೀಜಗಳ ಕಿಟ್ ಸಮರ್ಪಕವಾಗಿ ಬಳಸಬೇಕೆಂದು ತಿಳಿಸಿದರು. ಜೆಎಸ್ಎಸ್ ಕೆವಿಕೆಯ ಆವರಣದಲ್ಲಿ ಅತಿಥಿಗಳಿಂದ ಗಿಡಗಳನ್ನು ನೆಡಲಾಯಿತು. ೧೦೦ ತರಕಾರಿ ಬೀಜಗಳ ಕಿಟ್ ಹಾಗೂ ತರಕಾರಿ ಗಿಡಗಳನ್ನು ರೈತ/ರೈತ ಮಹಿಳೆಯರು ಹಾಗೂ ವಿದ್ಯರ್ಥಿಗಳಿಗೆ ವಿತರಿಸಲಾಯಿತು. ಕಾರ್ಯಕ್ರಮದಲ್ಲಿ ರೈತ/ರೈತ ಮಹಿಳೆಯರು ಹಾಗೂ ಹೊಸಕೋಟೆಯ ಗುರಮಹಂತೇಶ ಶಾಲೆಯ ಶಿಕ್ಷಕರು ಹಾಗೂ ವಿದ್ಯಾ, ಮೈಸೂರು ಅಧ್ಯಾಯದ ಕೃಷಿ ತಂತ್ರಜ್ಞರ ಸಂಸ್ಥೆಯ ಸಿಬ್ಬಂದಿಗಳು, ಸುತ್ತೂರಿನ ಜೆಎಸ್ಎಸ್ ದಾಸೋಹ ಭವನದ ಸಿಬ್ಬಂದಿಗಳು, ಡಣಾಯಕನಪುರದ ಡಿ. ಎಲ್. ಮಹದೇವಪ್ಪ, ಚಿನ್ನಬುದ್ದಿ, ಕೆವಿಕೆಯ ಸಿಬ್ಬಂದಿಯವರು, ನೊಯ್ಡಾ ವಿಶ್ವ ವಿದ್ಯಾಲಯದ ವಿದ್ಯರ್ಥಿಗಳು ಹಾಗೂ ಇತರರು ಸೇರಿ ೧೧೯ ಕ್ಕೂ ಹೆಚ್ಚು ಜನರು ಉಪಸ್ಥಿತರಿದ್ದರು.


ರೈತ ಉತ್ಪಾದಕರ ಸಂಘದ ಸದಸ್ಯರುಗಳಿಗೆ ತರಬೇತಿ

ದಿನಾಂಕ ೩೦.೦೯.೨೦೨೨ ರಂದು ಸುತ್ತೂರಿನ ಐಸಿಎಆರ್ ಜೆಎಸ್ಎಸ್ ಕೃಷಿ ವಿಜ್ಞಾನ ಕೇಂದ್ರ ಹಾಗೂ ಈಶಾ ಫೌಂಡೇಷನ್ ಸಂಸ್ಥೆಯ ನಂಜುಂಡೇಶ್ವರ ರೈತ ಉತ್ಪಾದಕರ ಸಂಘದ ಸಹಯೋಗದಲ್ಲಿ ನಂಜನಗೂಡಿನ ಎಪಿಎಮ್ ಸಿ ಆವರಣದಲ್ಲಿ ರೈತ ಉತ್ಪಾದಕ ಸಂಘದ ಸದಸ್ಯರುಗಳಿಗೆ ಬಾಳೆ ಬೆಳೆಯಲ್ಲಿ ಸುಧಾರಿತ ಬೇಸಾಯ ಕ್ರಮಗಳು ಹಾಗೂ ತೋಟಗಾರಿಕಾ ಬೆಳೆಗಳಲ್ಲಿ ರಸಾವರಿ ಪದ್ಧತಿಗಳ ತರಬೇತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಈ ತರಬೇತಿಯಲ್ಲಿ ಕೆವಿಕೆಯ ತೋಟಗಾರಿಕೆ ವಿಜ್ಞಾನಿಯಾದ ಡಾ. ವಿನಯ್ ಜಿ.ಎಮ್. ರವರು ಬಾಳೆ ಬೆಳೆಯಲ್ಲಿ ಪೋಷಕಾಂಶಗಳ ನಿರ್ವಹಣೆ, ಕೀಟ ಮತ್ತು ರೋಗಗಳ ನಿರ್ವಹಣೆ ಹಾಗೂ ತೋಟಗಾರಿಕೆ ಬೆಳೆಗಳಲ್ಲಿ ರಸಾವರಿ ಪದ್ಧತಿಯಲ್ಲಿ ನೀರಿನಲ್ಲಿ ಕರಗುವ ರಸಗೊಬ್ಬರಗಳ ಬಳಕೆಯ ಬಗ್ಗೆ ತರಬೇತಿ ನೀಡಿದರು. ಈ ಕಾರ್ಯಕ್ರಮದಲ್ಲಿ ಈಶಾ ಫೌಂಡೇಷನ್ ಸಂಸ್ಥೆಯ ಸ್ವಾಮೀಜಿಗಳು, ಸ್ವಯಂ ಸೇವಕರು, ನಂಜುಂಡೇಶ್ವರ ರೈತ ಉತ್ಪಾದಕರ ಸಂಘದ ಸದಸ್ಯರುಗಳು ಸೇರಿ ೨೫೦ ಕ್ಕೂ ಹೆಚ್ಚು ಜನರು ಭಾಗವಹಿಸಿ ಸದುಪಯೋಗ ಪಡೆದುಕೊಂಡರು.



ಹಕ್ಕುಗಳನ್ನು ಕಾಯ್ದಿರಿಸಿದೆ : ಹಿರಿಯ ವಿಜ್ಞಾನಿ ಮತ್ತು ಮುಖ್ಯಸ್ಥರು, ಐಸಿಎಆರ್ ಜೆಎಸ್ಎಸ್ ಕೃಷಿ ವಿಜ್ಞಾನ ಕೇಂದ್ರ, ಸುತ್ತೂರು, ಮೈಸೂರು ಜಿಲ್ಲೆ ಭೇಟಿ ಸಂಖ್ಯೆ: