ಅಕ್ಟೋಬರ್ ಮತ್ತು ನವೆಂಬರ್ 2022 ಕಾರ್ಯಕ್ರಮಗಳು


ಗಾಂಧಿಜೀ ಹಾಗೂ ಲಾಲ್ ಬಹದ್ದೂರು ಶಾಸ್ತ್ರಿ ಜಯಂತಿ

ದಿನಾಂಕ 2 ಅಕ್ಟೋಬರ್ 2022 ರಂದು ಸುತ್ತೂರಿನ ಜೆಎಸ್ಎಸ್ ಶಿಕ್ಷಣ ಸಂಸ್ಥೆಗಳ ಆಶ್ರಯದಲ್ಲಿ ಮಹಾತ್ಮ ಗಾಂಧಿ, ಲಾಲ್ ಬಹದ್ದೂರ್ ಶಾಸ್ತ್ರಿ ಜಯಂತಿ ಹಾಗೂ ಅಂತರರಾಷ್ಟ್ರೀಯ ಹಿರಿಯ ನಾಗರೀಕರ ದಿನಾಚರಣೆಯನ್ನು ಆಚರಿಸಲಾಯಿತು. ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಮೈಸೂರು ಮಹಾರಾಜ ಕಾಲೇಜಿನ ನಿವೃತ್ತ ಪ್ರಾಂಶುಪಾಲರಾದ ಡಾ. ಕೆ. ಕಾಳಚನ್ನೇಗೌಡರವರು ಗಾಂಧೀಜಿಯವರ ತತ್ವ ಮತ್ತು ಸಿದ್ದಾಂತಗಳ ಬಗ್ಗೆ ಮಾತನಾಡುತ್ತಾ, ಗಾಂಧೀಜಿಯವರು ದೇಶದಲ್ಲಿ ಬಡತನ ಕಂಡು ಶ್ರೀಮಂತಿಕೆಯ ಜೀವನವನ್ನು ತ್ಯಜಿಸಿ ಸರಳ ಜೀವನ ನಡೆಸಿ ಸಮಾಜಕ್ಕೆ ಮಾದರಿಯಾಗಿದ್ದರು ಎಂದರು. ಲಾಲ್ ಬಹದ್ದೂರ್ ಶಾಸ್ತ್ರಿಜಿಯವರ ಬಗ್ಗೆ ಮಾತನಾಡುತ್ತಾ, ಅವರ ಘೋಷಣೆಯಾದ ಜೈ-ಜವಾನ್ ಜೈ-ಕಿಸಾನ್ ಎಂಬುದು ಇಂದಿಗೂ ಜನಜನಿತವಾಗಿದೆ. ಅವರ ತತ್ವಗಳನ್ನು ಆಳಡಿಸಿಕೊಳ್ಳಲು ಕರೆನೀಡಿದರು. ಮತ್ತೋರ್ವ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಮೈಸೂರಿನ ನಿವೃತ್ತ ಅಭಿಯಂತರರಾದ ಶ್ರೀ ಎಂ.ಎ. ಪಾಟೀಲ್‌ರವರು ಭಾಷಣದಲ್ಲಿ ತಮ್ಮ ಜೀವನದ ಅನುಭವಗಳನ್ನು ಹಂಚಿಕೊಂಡರು. ಹಿರಿಯ ನಾಗರೀಕರು ಕಾಲಹರಣ ಮಾಡದೆ ಸಮಾಜ ಸೇವೆಯನ್ನು ಮಾಡುವ ಮೂಲಕ ಸಮಾಧಾನವನ್ನು ಕಂಡುಕೊಳ್ಳಬೇಕು ಎಂದು ಸಲಹೆ ನೀಡಿದರು. ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಜೆಎಸ್‌ಎಸ್ ಸಂಸ್ಥೆಗಳ ಹೆಚ್ಚುವರಿ ಸಂಯೋಜನಾಧಿಕಾರಿಗಳಾದ ಶ್ರೀ ಸಂಪತ್ತುರವರು ಕುಟುಂಬದಲ್ಲಿ ಹಿರಿಯರಿದ್ದರೆ ಯಾವಾಗಲೂ ಆ ಮನೆ ನಂದಗೋಕುಲವಿದ್ದಂತೆ ಆದ್ದರಿಂದ ಅವರನ್ನು ಮನೆಯಲ್ಲಿ ಕಡೆಗಾಣಿಸದೆ ಪ್ರೀತಿ, ಗೌರವ, ಸಂತೋಷದಿAದ ಕಾಣಬೇಕು ಎಂದು ನುಡಿದರು.


ಸ್ವಚ್ಛತಾ ಅಭಿಯಾನ 2.0

ಜೆಎಸ್ಎಸ್ ಕೆವಿಕೆ, ಸುತ್ತೂರು ವತಿಯಿಂದ ಫಾರ್ಮ್ ಸ್ವಚ್ಛತಾ ಅಭಿಯಾನವನ್ನು ಸ್ವಚ್ಛತಾ ವಿಶೇಷ ಅಭಿಯಾನ 2.0 ಕಾರ್ಯಕ್ರಮದಡಿಯಲ್ಲಿ ಹಮ್ಮಿಕೊಳ್ಳಲಾಗಿತ್ತು. ರೈತರಿಗೆ ಬಾಳೆ ಪ್ಲಾಟ್ನ ಬೆಳೆ ಶೇಷ ನಿರ್ವಹಣೆ ಕುರಿತು ಜಾಗೃತಿ ಮೂಡಿಸಲಾಯಿತು. ವಿಶೇಷ ಅಭಿಯಾನ 2.0 ಸಮಯದಲ್ಲಿ ಕಚೇರಿ ಆವರಣ ಮತ್ತು ಆಡಳಿತ ಕಟ್ಟಡದ ಇತರ ಸ್ಥಳಗಳನ್ನು ಸ್ವಚ್ಛಗೊಳಿಸಲಾಯಿತು.


ಜಲಶಕ್ತಿ ಅಭಿಯಾನ

ಜಲಶಕ್ತಿ ಅಭಿಯಾನದ ಅಂಗವಾಗಿ ದಿನಾಂಕ ೧೧.೧೦.೨೦೨೨ ರಂದು ಜಲ ಸಂರಕ್ಷಣೆ ಹಾಗೂ ಕೃಷಿ ಹೊಂಡಗಳಲ್ಲಿ ಮೀನು ಸಾಕಾಣಿಕೆ ಕುರಿತು ಜೆಎಸ್‌ಎಸ್ ಕೆವಿಕೆಯ ಪಶು ವಿಜ್ಞಾನಿ ಡಾ. ಯು.ಎಮ್. ರಕ್ಷಿತ್ ರಾಜ್ ರವರು ಮಾಹಿತಿ ನೀಡಿದರು. ಈ ಕಾರ್ಯಕ್ರಮದಲ್ಲಿ ೩೬ ಸ್ವ ಸಹಾಯ ಸಂಘದ ಮಹಿಳೆಯರು ಭಾಗವಹಿಸಿದ್ದರು. ದಿನಾಂಕ ೨೦.೧೦.೨೦೨೨ ರಂದು ಕೆವಿಕೆಯ ಬೇಸಾಯ ಶಾಸ್ತç ವಿಜ್ಞಾನಿಯಾದ ಶ್ರೀ ಶಾಮರಾಜ್ ರವರು ಜಲ ಸಂರಕ್ಷಣೆಗಾಗಿ ಜಮೀನಿನಲ್ಲಿ ಬದುಗಳ ನಿರ್ಮಾಣ ಹಾಗೂ ಇಂಗು ಗುಂಡಿಗಳ ನಿರ್ಮಾಣ, ಮಣ್ಣು ಹಾಗೂ ನೀರು ಸಂರಕ್ಷಣೆ ಕುರಿತು ಮಾಹಿತಿ ನೀಡಿದರು. ಈ ಕಾರ್ಯಕ್ರಮದಲ್ಲಿ ೬೮ ಸ್ವ ಸಹಾಯ ಸಂಘದ ಮಹಿಳೆಯರು ಭಾಗವಹಿಸಿದ್ದರು.


ರೈತ ಮಹಿಳಾ ದಿನಾಚರಣೆ

ಐಸಿಎಆರ್ ಜೆಎಸ್ಎಸ್ ಕೃಷಿ ವಿಜ್ಞಾನ ಕೇಂದ್ರದಲ್ಲಿ ರಾಷ್ಟ್ರೀಯ ರೈತ ಮಹಿಳಾ ದಿನಾಚರಣೆಯನ್ನು ಆಚರಿಸಲಾಯಿತು. ಕಾರ್ಯಕ್ರಮದಲ್ಲಿ ಬನ್ನೂರು ಹೋಬಳಿಯ ಬಿ. ಸಿ. ಹಳ್ಳಿ ಗ್ರಾಮದ ಪ್ರಗತಿಪರ ರೈತ ಮಹಿಳೆಯಾದ ಶ್ರೀಮತಿ ಮಹಾಲಕ್ಷ್ಮಿ ಪ್ರಭಾಕರ್ ಅವರನ್ನು ಸನ್ಮಾನಿಸಲಾಯಿತು. ರೈತ ಮಹಿಳೆಯರು ಹೈನುಗಾರಿಕೆಯನ್ನು ಅವಲಂಭಿಸಿದರೆ ಸ್ವಾವಲಂಭಿಗಳಾಗಬಹುದೆAದು ನೆರೆದಿದ್ದ ಮಹಿಳೆಯರಿಗೆ ಹೇಳಿದರು. ಎಸ್.ಬಿ.ಐ.ನ ಆರ್ಥಿಕ ಸಾಕ್ಷರತೆ ತಜ್ಞರಾದ ಶ್ರೀ ಡಿ. ಟಿ. ವೆಂಕಟೇಶ್ ರವರು ಮಾತನಾಡಿ, ಕೇಂದ್ರ ಸರ್ಕಾರದ ಹಲವು ಜೀವವಿಮಾ ಯೋಜನೆಗಳಾದ ಪ್ರಧಾನ ಮಂತ್ರಿ ಜೀವನ್ ಜ್ಯೋತಿ ಭೀಮಾ ಯೋಜನೆ ಮತ್ತು ಪ್ರಧಾನ ಮಂತ್ರಿ ಸುರಕ್ಷಾ ಭೀಮಾ ಯೋಜನೆಯ ಬಗ್ಗೆ ತಿಳಿಸಿದರು. ಜೊತೆಗೆ ರೈತರಿಗೆ ಇ-ಶ್ರಮ ಕಾರ್ಡ್ ಮಾಡಿಸಲು ಸೂಚಿಸಿದರು. ಐಸಿಎಆರ್‌ ಜೆಎಸ್ಎಸ್ ಕೃಷಿ ವಿಜ್ಞಾನ ಕೇಂದ್ರದ ಹಿರಿಯ ವಿಜ್ಞಾನಿ ಮತ್ತು ಮುಖ್ಯಸ್ಥರಾದ ಶ್ರೀಮತಿ ಹೆಚ್. ವಿ. ದಿವ್ಯಾರವರು ಮಾತನಾಡಿ, ಮಹಿಳೆಯರು ಕುಟುಂಬದ ಬೆನ್ನೆಲುಬು. ರಾಷ್ಟ್ರೀಯ ರೈತ ಮಹಿಳಾ ದಿನಾಚರಣೆಯ ಮೂಲ ಉದ್ದೇಶ ರೈತ ಮಹಿಳೆಯರ ಸಬಲೀಕರಣ ಮತ್ತು ಮಹಿಳೆಯರು ಕೃಷಿಯಲ್ಲಿ ಹೆಚ್ಚಾಗಿ ಭಾಗವಹಿಸಲು ಪ್ರೋತ್ಸಾಹ ನೀಡುವುದು ಎಂದು ತಿಳಿಸಿದರು. ಕಾರ್ಯಕ್ರಮದಲ್ಲಿ ಪ್ರಗತಿಪರ ರೈತರಾದ ಆಯರಹಳ್ಳಿ ಗ್ರಾಮದ ಮಾದಪ್ಪ ಹಾಗೂ ಇತರ ರೈತರು ಮತ್ತು ಹಾಲು ಉತ್ಪಾದಕ ಸಹಕಾರ ಸಂಘದ ಮಹಿಳಾ ಸದಸ್ಯರು, ಧಾನ್ ಫೌಂಡೇಶನ್ ಸದಸ್ಯರು ಮತ್ತು ೪೫ ಕ್ಕೂ ಹೆಚ್ಚಿನ ರೈತ ಮಹಿಳೆಯರು ಭಾಗವಹಿಸಿದ್ದರು.


ಕೆವಿಕೆಗೆ ಗಣ್ಯ ವ್ಯಕ್ತಿಗಳ ಭೇಟಿ

ದೆಹಲಿಯ ಕೃಷಿ ಅನುಸಂಧಾನ ಪರಿಷತ್ ನ ಹಿರಿಯ ಹಣಕಾಸು ಅಧಿಕಾರಿಗಳಾದ ಶ್ರೀ ಕುನಾಲ್ ರವರು, ಬೆಂಗಳೂರಿನ ಅಟಾರಿ ಸಂಸ್ಥೆಯ ಮುಖ್ಯ ತಾಂತ್ರಿಕ ಅಧಿಕಾರಿಗಳಾದ ಡಾ. ಮಲ್ಲಿಕಾರ್ಜುನ ಹಂಜಿ ಹಾಗೂ ಆಡಳಿತಾಧಿಕಾರಿಗಳಾದ ಶ್ರೀ ರುಕ್ಮನ್ ರವರು ಕೆವಿಕೆಗೆ ಭೇಟಿ ನೀಡಿ ಲೆಕ್ಕ ಪತ್ರ ಪರಿಶೀಲಿಸಿ ಉತ್ತಮವಾಗಿ ನಿರ್ವಹಣೆ ಮಾಡಿರುವುದಕ್ಕೆ ಪ್ರಶಂಸೆ ವ್ಯಕ್ತ ಪಡಿಸಿದರು ಹಾಗೂ ಕೆವಿಕೆ ಪ್ರಾತ್ಯಕ್ಷಿಕೆ ಘಟಕಗಳಿಗೆ ಭೇಟಿ ನೀಡಿ ಚಟುವಟಿಕೆಗಳ ಬಗ್ಗೆ ಮೆಚ್ಚುಗೆ ವ್ಯಕ್ತ ಪಡಿಸಿದರು.


ಕೃಷಿಯಲ್ಲಿ ಡ್ರೋನ್ ಬಳಕೆ ಪದ್ಧತಿ ಪ್ರಾತ್ಯಕ್ಷಿಕೆ

ಐಸಿಎಆರ್ ಜೆಎಸ್ಎಸ್ ಕೃಷಿ ವಿಜ್ಞಾನ ಕೇಂದ್ರ, ಸುತ್ತೂರು ಇಲ್ಲಿ “ಕೃಷಿಯಲ್ಲಿ ಡ್ರೋನ್ ಬಳಕೆ” ಕುರಿತಾದ ತರಬೇತಿ ಹಾಗೂ ಪ್ರಾತ್ಯಕ್ಷಿಕೆಯನ್ನು ಹಮ್ಮಿಕೊಳ್ಳಲಾಗಿತ್ತು. ಕೆವಿಕೆಯ ಸುತ್ತಮುತ್ತ ಗ್ರಾಮದ ರೈತರು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಮಲ್ಟಿಪ್ಲೆಕ್ಸ್ ಕಂಪನಿಯ ಎಂ-ಡ್ರೋನ್ ಬಳಕೆಯ ಕುರಿತು ಕಂಪನಿಯ ಮುಖ್ಯ ಕಾರ್ಯನಿರ್ವಾಹಕ ಕಾರ್ಯನಿರ್ವಾಹಣಾಧಿಕಾರಿ ಶ್ರೀ ಮುನಿಷ್‌ರವರು ಸವಿಸ್ತಾರವಾಗಿ ತಿಳಿಸಿಕೊಟ್ಟರು. ಕೆವಿಕೆ ಆವರಣದಲ್ಲಿ ಡ್ರೋನ್ ಹಾರಿಸಿ ಬೆಳೆಗಳಲ್ಲಿ ಸಿಂಪರಣೆ ಕುರಿತು ಪ್ರಾತ್ಯಕ್ಷಿಕೆಯನ್ನು ರೈತರು ವೀಕ್ಷಿಸಿದರು. ಕೆವಿಕೆಯ ಭತ್ತದ ತಾಕಿನಲ್ಲಿ ಪ್ರಾತ್ಯಕ್ಷಿಕೆ ಕ್ಷೇತ್ರದಲ್ಲಿ ಡ್ರೋನ್ ಬಳಸಿ ನ್ಯಾನೋ ಯೂರಿಯಾ ಸಿಂಪರಣೆ ಪದ್ಧತಿ ಪ್ರಾತ್ಯಕ್ಷಿಕೆ ಕೈಗೊಂಡು ಡ್ರೋನ್ ಬಳಕೆಯ ಕುರಿತು ರೈತರಿಗೆ ಮನದಟ್ಟು ಮಾಡಲಾಯಿತು. ಒಂದು ಎಕರೆಗೆ ರೂ 650/- ರಂತೆ ಬಾಡಿಗೆ ಹಾಗೂ ಕನಿಷ್ಟ ಒಂದು ಕಡೆ 3 ರಿಂದ 4 ಎಕರೆಯಂತೆ ಒಟ್ಟು 50 ಎಕರೆವರೆಗೆ ಒಂದು ದಿನದಲ್ಲಿ ಸಿಂಪಡಣೆ ಮಾಡಬಹುದು. ಡ್ರೋನ್‌ನಿಂದ ಸಿಂಪಡಣೆ ಮಾಡಲು 1 ಎಕರೆಗೆ 10 ನಿಮಿಷ ಹಾಗೂ ೧೪೦ಮಿಲಿ ಔಷಧಿ ಸಾಕು. ಔಷಧಿಯು ನ್ಯಾನೋ ಪಾರ್ಟಿಕಲ್ಸ್ ಆಗಿ ವಿಭಜನೆಗೊಂಡು ಗಿಡದ ಮೇಲೆ ಬೀಳುವುದರಿಂದ ಔಷಧಿ ಉಪಯೋಗದ ಮಟ್ಟ ಹೆಚ್ಚುತ್ತದೆ ಎಂದು ತಿಳಿಸಿದರು. 10 ಲೀಟರ್ ಔಷಧಿಯ ತೂಕದ ಟ್ಯಾಂಕ್ ಹಾಗೂ ಡ್ರೋನ್ ತೂಕ 14 ಕೆಜಿ ಒಟ್ಟು 24 ಕೆಜಿ ತೂಕದ ಡ್ರೋನ್ ಜಿಪಿಎಸ್ ಸಹಾಯದಿಂದ ಗೊತ್ತುಪಡಿಸಿದ ತಾಕಿಗೆ ಹೋಗಿ ಒಂದು ಸಾಲು ಬಿಡದಂತೆ ಸಿಂಪಡಿಸುತ್ತದೆ ಎಂದು ತಿಳಿಸಿದರು. ಪ್ರಾತ್ಯಕ್ಷಿಕೆಯಲ್ಲಿ ಕೆವಿಕೆ ಸಿಬ್ಬಂದಿವರ್ಗದವರು ಪಾಲ್ಗೊಂಡಿದ್ದರು.


ವಿಶ್ವ ಆಹಾರ ದಿನಾಚರಣೆ ಹಾಗೂ ಕಿಸಾನ್ ಸಮ್ಮಾನ್ ಸಮ್ಮೇಳನ

ದಿನಾಂಕ 18 ಅಕ್ಟೋಬರ್ 2022 ರಂದು ಸುತ್ತೂರಿನ ಐಸಿಎಆರ್ ಜೆಎಸ್‌ಎಸ್ ಕೃಷಿ ವಿಜ್ಞಾನ ಕೇಂದ್ರದಲ್ಲಿ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ಸಮ್ಮೇಳನದ ಆನ್ ಲೈನ್ ವೀಕ್ಷಣೆ ಹಾಗೂ ವಿಶ್ವ ಆಹಾರ ದಿನಾಚರಣೆಯನ್ನು ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯಕ್ರಮಗಳ ಅಂಗವಾಗಿ ಸಿರಿಧಾನ್ಯಗಳ ಅಡುಗೆ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು. ಮುಖ್ಯ ಅತಿಥಿಗಳಾದ ಸುತ್ತೂರಿನ ಐಸಿಎಆರ್ ಜೆಎಸ್‌ಎಸ್ ಕೃಷಿ ವಿಜ್ಞಾನ ಕೇಂದ್ರದ ನಿವೃತ್ತ ಗೃಹ ವಿಜ್ಞಾನಿಯಾದ ಶ್ರೀಮತಿ ಎನ್ ಜಮುನಾ ಅರಸ್ ರವರು ಮಾತನಾಡಿ ಈ ವರ್ಷದ ವಿಶ್ವ ಆಹಾರ ದಿನದ ಧ್ಯೇಯ ವಾಕ್ಯವು ‘ಆಹಾರ ಮತ್ತು ಪೋಷಣಾ ಮಟ್ಟದಲ್ಲಿ ಯಾರನ್ನೂ ಹಿಂದೆ ಬಿಡಬಾರದು’ ಎಂಬುದಾಗಿದೆ. ಜಾಗರೂಕತೆಯಿಂದ ಪೌಷ್ಟಿಕಯುಕ್ತ ಆಹಾರವನ್ನು ಸೇವಿಸಬೇಕಿದೆ ಎಂದು ಮಹಿಳೆಯರಿಗೆ ಕಿವಿಮಾತು ಹೇಳಿದರು. ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಬಿಳಿಗೆರೆ ಗ್ರಾಮ ಪಂಚಾಯಿತಿಯ ಅಧ್ಯಕ್ಷರಾದ ಶ್ರೀಮತಿ ರಾಜಮ್ಮ ಮಾದಪ್ಪರವರು, ಈ ಕಾರ್ಯಕ್ರಮಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ ಮಹಿಳೆಯರನ್ನು ನೋಡಿ ಸಂತೋಷವಾಗಿದ್ದು, ಮಹಿಳೆಯರು ಈ ಕಾರ್ಯಕ್ರಮದ ಸದುಪಯೋಗ ಪಡಿಸಿಕೊಳ್ಳಬೇಕೆಂದು ತಿಳಿಸಿದರು. ಐಸಿಎಆರ್ ಜೆಎಸ್‌ಎಸ್ ಕೃಷಿ ವಿಜ್ಞಾನ ಕೇಂದ್ರದ ಪ್ರಭಾರ ಹಿರಿಯ ವಿಜ್ಞಾನಿ ಹಾಗೂ ಮುಖ್ಯಸ್ಥರಾದ ಶ್ರೀಮತಿ ಹೆಚ್.ವಿ. ದಿವ್ಯಾರವರು ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ಸಮ್ಮೇಳನದಲ್ಲಿ ಮಾತನಾಡಿದ ಮಾನ್ಯ ಪ್ರಧಾನ ಮಂತ್ರಿಯವರ ಮಾತುಗಳನ್ನು ಕನ್ನಡಕ್ಕೆ ಅನುವಾದಿಸಿ ಮಹಿಳೆಯರಿಗೆ ಅರ್ಥವಾಗುವ ರೀತಿಯಲ್ಲಿ ತಿಳಿಸಿದರು. ಮುಖ್ಯವಾಗಿ ನ್ಯಾನೋ ಯೂರಿಯಾ, ರೈತರ ಆದಾಯ ದ್ವಿಗುಣ ಗೊಳಿಸುವ ಕಾರ್ಯಕ್ರಮಗಳ ಬಗ್ಗೆ ತಿಳಿಸಿದರು. ಜೊತೆಗೆ ಮಹಿಳೆಯರು ಪ್ರಧಾನ ಮಂತ್ರಿ ಆತ್ಮ ನಿರ್ಭರ ಯೋಜನೆಯ ಸದುಪಯೋಗಪಡಿಸಿಕೊಳ್ಳಬೇಕೆಂದು ತಿಳಿಸಿದರು. ವಿಶ್ವ ಆಹಾರ ದಿನಾಚರಣೆ ಹಾಗೂ ಅಂತಾರಾಷ್ಟಿಯ ಸಿರಿಧಾನ್ಯಗಳ ವರ್ಷ 2023 ರ ಅಂಗವಾಗಿ ಸಿರಿಧಾನ್ಯಗಳ ಅಡುಗೆ ಸ್ಪರ್ಧೆಯನ್ನು ಆಯೋಜಿಸಲಾದ ಕಾರ್ಯಕ್ರಮದಲ್ಲಿ 12 ಮಹಿಳೆಯರು ಭಾಗವಹಿಸಿ ರಾಗಿ ಶ್ಯಾವಿಗೆ, ಹಾರಕ ಕಜ್ಜಾಯ, ಸಾಮೆ ನಿಪ್ಪಿಟ್ಟು, ಸಾಮೆ ಚಕ್ಕುಲಿ, ರಾಗಿ ಸೂಪ್, ನವಣೆ ಅಕ್ಕಿ ಉಪ್ಪಿಟ್ಟು, ರಾಗಿ ಲಾಡು, ಇತ್ಯಾದಿ ಖಾದ್ಯಗಳನ್ನು ಪ್ರದರ್ಶಿಸಿದರು. ವಿಜೇತರಿಗೆ ಬಹುಮಾನಗಳನ್ನು ವಿತರಿಸಲಾಯಿತು. ಸ್ವ ಸಹಾಯ ಸಂಘದ ಮಹಿಳೆಯರು, ನೊಯ್ಡಾ ವಿಶ್ವ ವಿದ್ಯಾಲಯದ ವಿದ್ಯಾರ್ಥಿಗಳು, ಜೆಎಸ್‌ಎಸ್ ಕೆವಿಕೆಯ ಸಿಬ್ಬಂದಿಗಳು ಭಾಗವಹಿಸಿದ್ದರು.


ಹುಣಸೆಹಣ್ಣಿನ ಪ್ರಾತ್ಯಕ್ಷಿಕೆ

ದಿನಾಂಕ 21.10.2022 ರಂದು ಹುಣಸೂರು ತಾಲ್ಲೂಕಿನ ಹುಲ್ಯಾಳು ಗ್ರಾಮದಲ್ಲಿ ಸ್ವ ಸಹಾಯ ಸಂಘದ ಮಹಿಳೆಯರಿಗೆ ಹುಣಸೆಹಣ್ಣಿನ ಲಾಲಿಪಾಪ್, ಕುಟ್ಟುಂಡೆ ಹಾಗೂ ಕ್ಯಾಂಡಿ ತಯಾರಿಕೆಯನ್ನು ಪದ್ಧತಿ ಪ್ರಾತ್ಯಕ್ಷಿಕೆ ಮೂಲಕ ಕೆವಿಕೆಯ ಗೃಹ ವಿಜ್ಞಾನಿ ಶ್ರೀಮತಿ ನೇತ್ರಾವತಿ ಎತ್ತಿನಮನಿಯವರು ತೋರಿಸಿಕೊಟ್ಟರು. ಈ ಉತ್ಪನ್ನಗಳನ್ನು ತಯಾರಿಸಲು ಬೇಕಾಗುವ ಪರಿಕರಗಳನ್ನು ಸ್ವ ಸಹಾಯ ಸಂಘದ ಮಹಿಳೆಯರಿಗೆ ವಿತರಿಸಲಾಯಿತು.


ಜಲಶಕ್ತಿ ಅಭಿಯಾನ

ಜಲಶಕ್ತಿ ಅಭಿಯಾನದ ಅಂಗವಾಗಿ ದಿನಾಂಕ 11.10.2022 ರಂದು ಜಲ ಸಂರಕ್ಷಣೆ ಹಾಗೂ ಕೃಷಿ ಹೊಂಡಗಳಲ್ಲಿ ಮೀನು ಸಾಕಾಣಿಕೆ ಕುರಿತು ಜೆಎಸ್‌ಎಸ್ ಕೆವಿಕೆಯ ಪಶು ವಿಜ್ಞಾನಿ ಡಾ. ಯು.ಎಮ್. ರಕ್ಷಿತ್ ರಾಜ್ ರವರು ಮಾಹಿತಿ ನೀಡಿದರು. ಈ ಕಾರ್ಯಕ್ರಮದಲ್ಲಿ 36 ಸ್ವ ಸಹಾಯ ಸಂಘದ ಮಹಿಳೆಯರು ಭಾಗವಹಿಸಿದ್ದರು. ದಿನಾಂಕ 20.10.2022 ರಂದು ಕೆವಿಕೆಯ ಬೇಸಾಯ ಶಾಸ್ತ್ರ ವಿಜ್ಞಾನಿಯಾದ ಶ್ರೀ ಶಾಮರಾಜ್ ರವರು ಜಲ ಸಂರಕ್ಷಣೆಗಾಗಿ ಜಮೀನಿನಲ್ಲಿ ಬದುಗಳ ನಿರ್ಮಾಣ ಹಾಗೂ ಇಂಗು ಗುಂಡಿಗಳ ನಿರ್ಮಾಣ, ಮಣ್ಣು ಹಾಗೂ ನೀರು ಸಂರಕ್ಷಣೆ ಕುರಿತು ಮಾಹಿತಿ ನೀಡಿದರು. ಈ ಕಾರ್ಯಕ್ರಮದಲ್ಲಿ ೬೮ ಸ್ವ ಸಹಾಯ ಸಂಘದ ಮಹಿಳೆಯರು ಭಾಗವಹಿಸಿದ್ದರು.


ತಾರಸಿ ತೋಟ ಆನ್ಲೈನ್ ತರಬೇತಿ ಕಾರ್ಯಕ್ರಮ

ದಿನಾಂಕ 8 ನವೆಂಬರ್ 2022 ರಂದು ತಾರಸಿ ತೋಟ ಕುರಿತು ಆನ್ಲೈನ್ ತರಬೇತಿ ಕಾರ್ಯಕ್ರಮವನ್ನು ಕೆವಿಕೆಯಲ್ಲಿ ಹಮ್ಮಿಕೊಳ್ಳಲಾಯಿತು. ಶ್ರೀಮತಿ ನೇತ್ರಾವತಿ ಎತ್ತಿನಮನಿ ವಿಜ್ಞಾನಿ (ಗೃಹ ವಿಜ್ಞಾನ) ಕಾರ್ಯಕ್ರಮವನ್ನು ಆಯೋಜಿಸಿ ಆರೋಗ್ಯವನ್ನು ಸುಧಾರಿಸುವಲ್ಲಿ ತರಕಾರಿಗಳು ಮತ್ತು ಹಣ್ಣುಗಳ ಪ್ರಾಮುಖ್ಯತೆ, ತರಕಾರಿ ಕೃಷಿ, ತಾರಸಿ ತೋಟದಲ್ಲಿ ಬೆಳೆಯಬಹುದಾದ ತರಕಾರಿಗಳ ವಿವರಗಳನ್ನು ವಿವರಿಸಿದರು ಹಾಗೂ ತಾರಸಿ ತೋಟಕ್ಕೆ ಬೇಕಾದ ಸಾಮಗ್ರಿಗಳ ಬಗ್ಗೆ ವಿವರಿಸಿದರು. ತಾರಸಿ ತೋಟದಲ್ಲಿ ಔಷಧೀಯ ಸಸ್ಯಗಳ ಪ್ರಾಮುಖ್ಯತೆ ಕುರಿತು ಮಾಹಿತಿ ನೀಡಿದರು. ಶ್ರೀಮತಿ ಹೆಚ್. ವಿ. ದಿವ್ಯಾ ಪ್ರಭಾರ ಹಿರಿಯ ವಿಜ್ಞಾನಿ ಮತ್ತು ಮುಖ್ಯಸ್ಥರು ಮಾತನಾಡಿ ತಾರಸಿ ತೋಟದಲ್ಲಿ ಕೀಟ ಮತ್ತು ರೋಗಗಳ ನಿಯಂತ್ರಣ, ಸಾವಯವ ಗೊಬ್ಬರ ತಯಾರಿಕೆ, ವಿವಿಧ ರೀತಿಯ ಮಿಶ್ರಗೊಬ್ಬರಗಳು ಮತ್ತು ಸಾವಯವ (ನೈಸರ್ಗಿಕ) ಗೊಬ್ಬರಗಳ ತಯಾರಿಕೆಯ ವಿಧಾನಗಳ ಬಗ್ಗೆ ವಿವರಿಸಿದರು. 30ಕ್ಕೂ ಹೆಚ್ಚು ರೈತರು/ರೈತಮಹಿಳೆಯರು ಹಾಗೂ ನಗರದ ನಿವಾಸಿಗಳು ಆನ್ಲೈನ್ ತರಬೇತಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.


ಕಿಸಾನ್ ಸ್ವರಾಜ್ ಸಮ್ಮೇಳನ

ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ಘಟಿಕೋತ್ಸವ ಸಭಾಂಗಣದಲ್ಲಿ 11-13 ನವೆಂಬರ್ 2022 ರಂದು ೩ ದಿನಗಳ ಮೇಳದಲ್ಲಿ ಕಿಸಾನ್ ಸ್ವರಾಜ್ ಸಮ್ಮೇಳನವನ್ನು ಆಯೋಜಿಸಲಾಗಿತ್ತು. ಜೆಎಸ್ಎಸ್ ಕೆವಿಕೆಯಿಂದ ಹಿರಿಯ ವಿಜ್ಞಾನಿ ಮತ್ತು ಮುಖ್ಯಸ್ಥರು (ಪ್ರಭಾರ) ರವರು ಅಧಿವೇಶನದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಹಾಗೂ ಸಹ-ಸಂಘಟಕರಾಗಿ ಸಕ್ರಿಯವಾಗಿ ಭಾಗವಹಿಸಿದ್ದರು. ಪ್ರಸಿದ್ಧ “ಮೈಸೂರು ಮಲ್ಲಿಗೆ” ಭತ್ತದ ತಳಿ ಸೇರಿದಂತೆ 300 ರಿಂದ 400 ಕ್ಕೂ ಹೆಚ್ಚು ಭತ್ತದ ತಳಿಗಳು ಪ್ರದರ್ಶನದಲ್ಲಿದ್ದವು. 17 ರಾಜ್ಯಗಳ ರೈತರು ಮತ್ತು ಬೀಜ ಉಳಿಸುವವರು ಸಮ್ಮೇಳನದಲ್ಲಿ ಭಾಗವಹಿಸಿದ್ದರು. ಈ ಕಾರ್ಯಕ್ರಮವು ಆಲೋಚನೆಗಳನ್ನು ಹಂಚಿಕೊಳ್ಳಲು ವೇದಿಕೆಯಾಗಿ ಮತ್ತು ಅಪರೂಪದ ತಳಿಗಳ ಬೀಜಗಳನ್ನು ವಿನಿಮಯ ಮಾಡಿಕೊಳ್ಳುವ ವೇದಿಕೆಯಾಗಿತ್ತು. ಸಮೃದ್ಧ, ಜಾನಪದ ಸೇವಾ ಟ್ರಸ್ಟ್, ಐಸಿಎಆರ್-ಜೆಎಸ್ಎಸ್ ಕೆವಿಕೆ (ಸುತ್ತೂರು), ಮಣ್ಣು, ಅಲ್ಲಮ ರಿಸರ್ಚ್ ಮತ್ತು ಕಲ್ಚರಲ್ ಫೌಂಡೇಶನ್, ದೇಸಿ ಸೀಡ್ ಪ್ರೊಡ್ಯೂಸರ್ ಕಂಪನಿ ಲಿಮಿಟೆಡ್ ಮತ್ತು ಬೆಳವಲ ಫೌಂಡೇಶನ್ ಸಮ್ಮೇಳನದ ಜಂಟಿಯಾಗಿ ಆಯೋಜಿಸಿದ್ದವು. ದೇಶದಾದ್ಯಂತ 1900 ನೋಂದಾಯಿತ ರೈತರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. 19 ಸಮಾನಾಂತರ ಅಧಿವೇಶನಗಳನ್ನು ಆಯೋಜಿಸಲಾಗಿತ್ತು.


ಶಾಲಾ ಶಿಕ್ಷಣದಲ್ಲಿ ಕೃಷಿಯ ಪ್ರಾಮುಖ್ಯತೆ

ಕೃಷಿ ವಿಷಯವನ್ನು ಒಂದು ಆಸಕ್ತಿಕರ ಹಾಗು ಕೌಶಲ್ಯಾಧಾರಿತವಾಗಿ ಮಾಡುವ ಉದ್ದೇಶದಿಂದ ಶಾಲಾ ಶಿಕ್ಷಕರಿಗೆ ಕೃಷಿಯಲ್ಲಿ ಇರುವ ಅವಕಾಶ, ಆದ್ಯತೆ ಕುರಿತು ‘ಶಾಲಾ ಶಿಕ್ಷಣದಲ್ಲಿ ಕೃಷಿಯ ಪ್ರಾಮುಖ್ಯತೆ’ ಕುರಿತು ಎರಡು ದಿನದ ತರಬೇತಿ ಕಾರ್ಯಕ್ರಮವನ್ನು ಮೈಸೂರು ಜಿಲ್ಲೆಯ 26 ವಿವಿಧ ಶಾಲೆಯ ಆಯ್ದ ಶಿಕ್ಷಕರಿಗೆ 24-25 ನವೆಂಬರ್ 2022ರಂದು ಸುತ್ತೂರಿನ ಐಸಿಎಆರ್ ಜೆಎಸ್ಎಸ್ ಕೃಷಿ ವಿಜ್ಞಾನ ಕೇಂದ್ರದಲ್ಲಿ ನೀಡಲಾಯಿತು. ತರಬೇತಿ ಉದ್ಘಾಟನೆಯನ್ನು ನೆರವೇರಿಸಿದ ಸುತ್ತೂರಿನ ಜೆಎಸ್ಎಸ್ ಶಾಲೆಯ ಮುಖ್ಯೋಪಾಧ್ಯಾಯರಾದ ಶ್ರೀ ಶಿವಮಲ್ಲು ರವರು ಮಕ್ಕಳನ್ನು ಕೃಷಿಯತ್ತ ಸೆಳೆಯಲು ಕೃಷಿಯ ಬಗ್ಗೆ ಬೋಧನೆ ಮಾಡಲು ಶಿಕ್ಷಕರಿಗೆ ತಿಳಿಸಿದರು ಮತ್ತು ರೈತರ ಮಕ್ಕಳಿಗೆ ಕೃಷಿಯಲ್ಲಿ ಒಲವು ಇರುವುದರಿಂದ ಆಧುನಿಕ ತಂತ್ರಜ್ಞಾನವನ್ನು ಬಳಸಿ ಕೃಷಿಯಲ್ಲಿ ಪ್ರಗತಿ ಸಾಧಿಸಬಹುದೆಂದು ತಿಳಿಸಿದರು. ತರಬೇತಿಯಲ್ಲಿ ಕೆವಿಕೆಯ ಪ್ರಭಾರ ಹಿರಿಯ ವಿಜ್ಞಾನಿ ಹಾಗು ಮುಖ್ಯಸ್ಥರಾದ ಶ್ರೀಮತಿ ದಿವ್ಯಾರವರು ಶೇ.53ರಷ್ಟು ಹೆಣ್ಣು ಮಕ್ಕಳು 9 ವರ್ಷದ ಮೊದಲೇ ಶಾಲೆಯಿಂದ ದೂರ ಸರಿಯುತ್ತಿದ್ದಾರೆ. ರೈತರ ಮಕ್ಕಳೇ ಹೆಚ್ಚಾಗಿರುವ ಶಾಲೆಯಲ್ಲಿ ಕೃಷಿ ಬಗ್ಗೆ, ತೋಟಗಾರಿಕೆ ಬಗ್ಗೆ, ಹೈನುಗಾರಿಕೆ, ರೇಷ್ಮೆ ಇನ್ನಿತರ ಕೃಷಿ ಸಂಬAಧಿತ ವಿಷಯಗಳ ಕುರಿತು ಪಠ್ಯವನ್ನು ಬೋಧಿಸಿದಾಗ ಮಕ್ಕಳನ್ನು ಶಾಲೆಗೆ ಆಕರ್ಷಿತರಾಗಿ ಮಾಡಬಹುದು ಎಂದು ತಿಳಿಸಿದರು. ಡಾ. ಪಲ್ಲವಿ ಹೆಚ್ ಎಂ. ಸಹಾಯಕ ಪ್ರಾಧ್ಯಾಪಕರು, ತೋಟಗಾರಿಕಾ ಕಾಲೇಜು ಇಲವಾಲ ಇವರು ಕೃಷಿ ವಿಷಯಗಳಲ್ಲಿ ಪಿಯುಸಿ ನಂತರ ಪದವಿ, ಎಸ್ಎಸ್ಎಲ್ಸಿ ನಂತರ ಡಿಪ್ಲೋಮಾ, 7ನೆಯ ತರಗತಿ ನಂತರ ಯುವಕರು ಕೌಶಲ್ಯಾಧಾರಿತ ತರಬೇತಿಗಳನ್ನು ಪಡೆದುಕೊಳ್ಳಬಹುದು ಎಂದು ತಿಳಿಸಿದರು. ತರಬೇತಿಯಲ್ಲಿ ಮೈಸೂರು ಜಿಲ್ಲೆಯ ವಿವಿಧ ಶಾಲೆಯ 26 ಶಿಕ್ಷಕರು ಆಸಕ್ತಿಯಿಂದ ಭಾಗವಹಿಸಿದ್ದರು. ಶಿಕ್ಷಕರನ್ನು ಪ್ರೋತ್ಸಾಹಿಸುವ ಸಲುವಾಗಿ ಕೆವಿಕೆಯ ವತಿಯಿಂದ ವಿವಿಧ ಗಿಡಗಳನ್ನು ವಿತರಿಸಿ ತಮ್ಮ ಶಾಲೆಯಲ್ಲಿ ನೆಟ್ಟು, ಕೈದೋಟ ನಿರ್ಮಿಸಿ ಕೃಷಿಪಾಠದ ಕುರಿತು ಮಕ್ಕಳಿಗೆ ಅರಿವು ಮೂಡಿಸಲು ತಿಳಿಸಲಾಯಿತು.


ಸ್ವಸಹಾಯ ಸಂಘದವರಿಗೆ ಕೌಶಲ್ಯ ತರಬೇತಿ

ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭೀವೃದ್ಧಿ ಯೋಜನೆಯ ಸ್ವಸಹಾಯ ಸಂಘದ ಸದಸ್ಯರುಗಳಿಗೆ ಕೌಶಲ್ಯ ತರಬೇತಿಯನ್ನು ದಿನಾಂಕ 27.11.2022 ರಂದು ಹಮ್ಮಿಕೊಳ್ಳಲಾಗಿತ್ತು. ತರಬೇತಿಯಲ್ಲಿ ಜೇನು ಸಾಕಾಣಿಕೆ, ನರ್ಸರಿ ನಿರ್ವಹಣೆ, ಎರೆಗೊಬ್ಬರ ಉತ್ಪಾದನೆ ಹಾಗೂ ಅಜೋಲ್ಲ ಉತ್ಪಾದನೆ ಕುರಿತು ಮಾಹಿತಿ ನೀಡಲಾಯಿತು. 50 ಸ್ವಸಹಾಯ ಸಂಘದ ಸದಸ್ಯರುಗಳು ತರಬೇತಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.


ಹಕ್ಕುಗಳನ್ನು ಕಾಯ್ದಿರಿಸಿದೆ : ಹಿರಿಯ ವಿಜ್ಞಾನಿ ಮತ್ತು ಮುಖ್ಯಸ್ಥರು, ಐಸಿಎಆರ್ ಜೆಎಸ್ಎಸ್ ಕೃಷಿ ವಿಜ್ಞಾನ ಕೇಂದ್ರ, ಸುತ್ತೂರು, ಮೈಸೂರು ಜಿಲ್ಲೆ ಭೇಟಿ ಸಂಖ್ಯೆ: