ಜೂನ್ ಮತ್ತು ಜುಲೈ 2022 ಕಾರ್ಯಕ್ರಮಗಳು


ವಿಶ್ವ ಹಾಲು ದಿನಾಚರಣೆ 2022

ದಿನಾಂಕ 1 ಜೂನ್ 2022 ರಂದು ನಂಜನಗೂಡು ತಾಲ್ಲೂಕಿನ ಹರತಲೆ ಗ್ರಾಮದಲ್ಲಿ ವಿಶ್ವ ಹಾಲು ದಿನಾಚರಣೆಯನ್ನು ಹಮ್ಮಿಕೊಳ್ಳಲಾಗಿತ್ತು. ವಿಶ್ವ ಕ್ಷೀರ ದಿನದ ಅಂಗವಾಗಿ ಜೆಎಸ್ಎಸ್ ಕೆವಿಕೆಯ ಪಶು ವಿಜ್ಞಾನಿ ಡಾ. ರಕ್ಷಿತ್ ರಾಜ್ ಯು.ಎಮ್. ರವರು ಮಾತನಾಡಿ ಹಾಲಿನಲ್ಲಿರುವ ಪೋಷಕಾಂಶಗಳು, ಶುದ್ಧ ಹಾಲಿನ ಉತ್ಪಾದನೆ, ಹಸುವಿನ ಕೊಟ್ಟಿಗೆಯಲ್ಲಿ ಕೈಗೊಳ್ಳಬೇಕಾದ ಸುಚಿತ್ವ, ಹಸುವಿನ ಪೋಷಕಾಂಶಗಳ ನಿರ್ವಹಣೆ ಹಾಗೂ ಹಾಲಿನ ಇಳುವರಿ ಹೆಚ್ಚಿಸಲು ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಮಾಹಿತಿ ನೀಡಿದರು. 26ಕ್ಕೂ ಹೆಚ್ಚು ರೈತರು ಭಾಗವಹಿಸಿದ್ದರು.


ವಿಶ್ವ ಪರಿಸರ ದಿನಾಚರಣೆ

ದಿನಾಂಕ 5 ಜೂನ್ 2022 ರಂದು ಸುತ್ತೂರಿನ ಐಸಿಎಆರ್ ಜೆಎಸ್ಎಸ್ ಕೃಷಿ ವಿಜ್ಞಾನ ಕೇಂದ್ರ ಹಾಗೂ ರೋಟರಿ ಮೈಸೂರು ಇವರ ಸಹಯೋಗದೊಂದಿಗೆ ವಿಶ್ವ ಪರಿಸರ ದಿನಾಚರಣೆಯನ್ನು ಆಚರಿಸಲಾಯಿತು. ಈ ಕಾರ್ಯಕ್ರಮದಲ್ಲಿ ಕೃಷಿ ವಿಜ್ಞಾನ ಕೇಂದ್ರದ ಪ್ರಭಾರ ಹಿರಿಯ ವಿಜ್ಞಾನಿ ಶ್ರೀಮತಿ ದಿವ್ಯಾ, ಹಿರಿಯ ವಿಜ್ಞಾನಿ ಮಂಜುನಾಥ ಅಂಗಡಿ ಹಾಗೂ ಕೇಂದ್ರದ ವಿಜ್ಞಾನಿಗಳಾದ ಡಾ. ವಿನಯ್ ಜಿ ಎಂ, ಗಂಗಪ್ಪ ಹಿಪ್ಪರಗಿ, ರಾಜಣ್ಣ, ಶಾಮರಾಜ್, ನೇತ್ರಾವತಿ, ಡಾ. ರಕ್ಷಿತ್, ಸುಂದರರಾಜು ಹಾಗೂ ಇತರೆ ಸಿಬ್ಬಂದಿ ವರ್ಗದವರು ಜೊತೆಗೆ ರೋಟರಿ ಸಂಸ್ಥೆಯ ಶ್ರೀನಿಧಿ ಮೂರ್ತಿ ಹಾಗೂ ಸಿಬ್ಬಂದಿ ವರ್ಗದವರು ಭಾಗವಹಿಸಿದ್ದರು. ಕಾರ್ಯಕ್ರಮದ ಅಂಗವಾಗಿ ಕೇಂದ್ರದಲ್ಲಿ ಹಣ್ಣಿನ ಗಿಡಗಳನ್ನು ನೆಟ್ಟು, ೫೦೦ಕ್ಕೂ ಹೆಚ್ಚು ಅರಣ್ಯ ಮತ್ತು ಹಣ್ಣಿನ ಗಿಡಗಳನ್ನು ಕಾರ್ಯಕ್ರಮದಲ್ಲಿ ಭಾಗವಹಿಸಿದ ರೈತರಿಗೆ ಉಚಿತವಾಗಿ ಪರಿಸರ ಸಂರಕ್ಷಣೆ ಉದ್ದೇಶದಿಂದ ವಿತರಿಸಲಾಯಿತು.


ಸಜ್ಜೆ ವಿಪಿಎಮ್ಎಚ್ 14 ಪ್ರಾತ್ಯಕ್ಷಿಕೆ ಹಾಗೂ ಮೌಲ್ಯವರ್ಧನೆ ತರಬೇತಿ

ದಿನಾಂಕ 1 ಜೂನ್ 2022 ರಂದು ನಂಜನಗೂಡು ತಾಲ್ಲೂಕಿನ ಹರತಲೆ ಗ್ರಾಮದಲ್ಲಿ ಸಜ್ಜೆ ವಿ.ಪಿ.ಎಮ್.ಎಚ್.- 14 ಪ್ರಾತ್ಯಕ್ಷಿಕೆ ಹಾಗೂ ಮೌಲ್ಯವರ್ಧನೆ ಕುರಿತಾದ ತರಬೇತಿ ಕಾರ್ಯಕ್ರಮ ಹಾಗೂ ವಿಶ್ವ ಹಾಲು ದಿನಾಚರಣೆಯನ್ನು ಹಮ್ಮಿಕೊಳ್ಳಲಾಗಿತ್ತು. ಕೆವಿಕೆಯ ಗೃಹ ವಿಜ್ಞಾನಿಯಾದ ಶ್ರೀಮತಿ ನೇತ್ರಾವತಿ ಎತ್ತಿನಮನಿಯವರು ಮಾತನಾಡಿ ಸಜ್ಜೆ ವಿ. ಪಿ. ಎಮ್.ಎಚ್.-14, ಬಯೋಪಾರ್ಟಿಪೈಡ್ ಹೈಬ್ರಿಡ್ ಆಗಿದ್ದು, ಹೆಚ್ಚಿನ ಪ್ರಮಾಣದ ಕಬ್ಬಿಣ ಹಾಗೂ ಜಿಂಕ್ ಪೋಷಕಾಂಶಗಳನ್ನು ಹೊಂದಿದೆ ಇದು 85 ರಿಂದ 90 ದಿನಗಳಿಗೆ ಕಟಾವಿಗೆ ಬರುವಂತದ್ದಾಗಿದೆ ಹಾಗೂ ಇದರ ಹುಲ್ಲು ಜಾನುವಾರುಗಳಿಗೆ ಉತ್ತಮ ಮೇವಾಗಿದೆ. ಬೆಳೆ ಕಟಾವಿನ ನಂತರ ಸ್ವ ಸಹಾಯ ಸಂಘದ ಮಹಿಳೆಯರಿಗೆ ಮೌಲ್ಯವರ್ಧನೆ ಬಗ್ಗೆ ಪ್ರಾತ್ಯಕ್ಷಿಕೆ ನೀಡಲಾಗುವುದು ಎಂದು ತಿಳಿಸಿದರು. ತರಬೇತಿಯ ನಂತರ 10 ಆಯ್ದ ರೈತರಿಗೆ ಸಜ್ಜೆ ವಿ. ಪಿ. ಎಮ್. ಎಚ್.-14 ಬಿತ್ತನೆ ಬೀಜಗಳನ್ನು ವಿತರಿಸಲಾಯಿತು.


ಬಾಳೆ ಮೌಲ್ಯವರ್ಧನೆಯಲ್ಲಿ ಉದ್ಯಮಶೀಲತೆ ತರಬೇತಿ

ದಿನಾಂಕ 11.06.2022 ರಂದು ನಂಜನಗೂಡು ತಾಲ್ಲೂಕಿನ ಹರತಲೆ ಗ್ರಾಮದಲ್ಲಿ ಸುತ್ತೂರಿನ ಐಸಿಎಆರ್ ಜೆಎಸ್ಎಸ್ ಕೃಷಿ ವಿಜ್ಞಾನ ಕೇಂದ್ರದ ವತಿಯಿಂದ ಬಾಳೆ ಮೌಲ್ಯವರ್ಧನೆಯಲ್ಲಿ ಉದ್ಯಮಶೀಲತೆ ಕುರಿತಾದ ತರಬೇತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಈ ತರಬೇತಿಯಲ್ಲಿ ಕೆವಿಕೆಯ ಗೃಹ ವಿಜ್ಞಾನಿ ಶ್ರೀಮತಿ ನೇತ್ರಾವತಿ ಎತ್ತಿನಮನಿಯವರು ಭಾಗವಹಿಸಿ ಬಾಳೆಹಣ್ಣಿನ ಮಹತ್ವ ಹಾಗೂ ವಿವಿಧ ಮೌಲ್ಯವರ್ಧಿತ ಉತ್ಪನ್ನಗಳ ಬಗ್ಗೆ ವಿವರಿಸಿ ಬಾಳೆ ಕಾಯಿ ಪುಡಿ ತಯಾರಿಕೆಯನ್ನು ಪ್ರಾತ್ಯಕ್ಷಿಕೆ ಮೂಲಕ ತೋರಿಸಿಕೊಟ್ಟರು. ಈ ಕಾರ್ಯಕ್ರಮದಲ್ಲಿ 30 ಸ್ವ ಸಹಾಯ ಸಂಘದ ಮಹಿಳೆಯರು ಭಾಗವಹಿಸಿದ್ದರು. ತರಬೇತಿಯ ನಂತರ ಪೌಷ್ಟಿಕ ಕೈತೋಟದ ಫಲಾನುಭವಿಗಳಿಗೆ ತರಕಾರಿ ಸಸಿಗಳು ಹಾಗೂ ಸೊಪ್ಪಿನ ಬೀಜಗಳನ್ನು ವಿತರಿಸಲಾಯಿತು.


ಕೈತೋಟ ಹಾಗೂ ಸಮುದಾಯ ತೋಟ ತರಬೇತಿ

ಮೈಸೂರು ಪ್ರಥಮ್ ಪೋಷಣ್ ಹಾಗೂ ಸುತ್ತೂರಿನ ಐಸಿಎಆರ್ ಜೆಎಸ್ಎಸ್ ಕೃಷಿ ವಿಜ್ಞಾನ ಕೇಂದ್ರದ ವತಿಯಿಂದ ಹಿತ್ತಲು ಹಾಗೂ ಸಮುದಾಯದ ತೋಟ ತರಬೇತಿ ಕಾರ್ಯಕ್ರಮವನ್ನು ದಿನಾಂಕ 2 ಜೂನ್ 2022 ರಂದು ಟಿ. ನರಸೀಪುರ ತಾಲ್ಲೂಕಿನ ಮುತ್ತತ್ತಿಯಲ್ಲಿ ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯಕ್ರಮದಲ್ಲಿ ಜೆಎಸ್ಎಸ್ ಕೆವಿಕೆಯ ಹಿರಿಯ ವಿಜ್ಞಾನಿಗಳಾದ ಶ್ರೀ ಮಂಜುನಾಥ ಅಂಗಡಿಯವರು ಮಾತನಾಡಿ ಹಸಿರು ಸೊಪ್ಪು ಹಾಗೂ ತರಕಾರಿಗಳನ್ನು ಹಿತ್ತಲಲ್ಲಿ ಬೆಳೆದು ಅವುಗಳನ್ನು ದಿನನಿತ್ಯದ ಅಡುಗೆಯಲ್ಲಿ ಬಳಸಬೇಕೆಂದರು ಹಾಗೂ ಜೆಎಸ್ಎಸ್ ಕೃಷಿ ವಿಜ್ಞಾನ ಕೇಂದ್ರದ ಚಟುವಟಿಕೆಗಳ ಬಗ್ಗೆ ಮಾಹಿತಿ ನೀಡಿದರು. ತರಬೇತಿಯಲ್ಲಿ ಜೆಎಸ್ಎಸ್ ಕೆವಿಕೆಯ ಗೃಹ ವಿಜ್ಞಾನಿ ಶ್ರೀಮತಿ ನೇತ್ರಾವತಿ ಎತ್ತಿನಮನಿಯವರು ಹಸಿರು ಮೆಂತ್ಯೆ, ಸಬ್ಸಿಗೆ, ದಂಟು, ಪಾಲಕ್, ಕರಿಬೇವು, ನುಗ್ಗೆ ಸೊಪ್ಪುಗಳು, ಪಪ್ಪಾಯ ಹಾಗೂ ನಿಂಬೆಹಣ್ಣುಗಳ ಮಹತ್ವ ಹಾಗೂ ಅವುಗಳನ್ನು ದಿನನಿತ್ಯದ ಅಡುಗೆಯಲ್ಲಿ ಬಳಸುವ ವಿಧಾನಗಳ ಕುರಿತು ಮಾಹಿತಿ ನೀಡಿದರು. ಮುತ್ತತ್ತಿ ಗ್ರಾಮದ ಮಹಿಳೆಯರು ಸೇರಿ ಸುಮಾರು 50ಕ್ಕೂ ಹೆಚ್ಚು ಜನರು ಭಾಗವಹಿಸಿದ್ದರು. ಕಾರ್ಯಕ್ರಮದ ನಂತರ ತರಕಾರಿ ಸಸಿಗಳು, ಸೊಪ್ಪಿನ ಬೀಜಗಳು ಹಾಗೂ ಔಷಧಿ ಗಿಡಗಳನ್ನು ವಿತರಿಸಲಾಯಿತು.


ಮೋಬೈಲ್ ಮಣ್ಣು ಪರೀಕ್ಷೆ

ದಿನಾಂಕ 01.06.2022 ರಂದು ಸುತ್ತೂರಿನ ಜೆಎಸ್ಎಸ್ ಕೆವಿಕೆಯ ಕಾರ್ಯಕ್ರಮ ಸಹಾಯಕ (ಮಣ್ಣು ವಿಜ್ಞಾನ) ರಾದ ಶ್ರೀ ಜೆ.ಜಿ. ರಾಜಣ್ಣರವರು ಮೊಬೈಲ್ ಮಣ್ಣು ಪರೀಕ್ಷೆ ವಾಹನದ ಮೂಲಕ ನಂಜನಗೂಡು ತಾಲ್ಲೂಕಿನ ಹರತಲೆ ಗ್ರಾಮದ ಸುಮಾರು 30 ಕ್ಕೂ ಹೆಚ್ಚು ರೈತರ ಜಮೀನಿನ ಮಣ್ಣನ್ನು ಪರೀಕ್ಷೆ ಮಾಡಿದರು. ದಿನಾಂಕ 02.06.2022 ರಂದು ಟಿ. ನರಸೀಪುರ ತಾಲ್ಲೂಕಿನ ಡಣಾಯಕನಪುರ ಗ್ರಾಮದಲ್ಲಿ ಕೆವಿಕೆಯ ಕಾರ್ಯಕ್ರಮ ಸಹಾಯಕ (ಮಣ್ಣು ವಿಜ್ಞಾನ) ರಾದ ಶ್ರೀ ಜೆ.ಜಿ. ರಾಜಣ್ಣರವರು ಮೊಬೈಲ್ ಮಣ್ಣು ಪರೀಕ್ಷೆ ವಾಹನ ಮೂಲಕ ಸುಮಾರು 40 ರೈತರ ಜಮೀನಿನ ಮಣ್ಣನ್ನು ಪರೀಕ್ಷೆ ಮಾಡಿದರು. ದಿನಾಂಕ 03.06.2022 ರಂದು ಕೆವಿಕೆಯ ಕಾರ್ಯಕ್ರಮ ಸಹಾಯಕ (ಮಣ್ಣು ವಿಜ್ಞಾನ) ರಾದ ಶ್ರೀ ಜೆ.ಜಿ. ರಾಜಣ್ಣರವರು ಮೊಬೈಲ್ ಮಣ್ಣು ಪರೀಕ್ಷೆ ವಾಹನ ಮೂಲಕ ಹುಣಸೂರು ತಾಲ್ಲೂಕಿನ ಹುಲ್ಯಾಳು ಗ್ರಾಮದಲ್ಲಿ 40 ರೈತರ ಜಮೀನಿನ ಮಣ್ಣನ್ನು ಪರೀಕ್ಷೆ ಮಾಡಿದರು.


ಹುಣಸೆಹಣ್ಣು ತರಬೇತಿ

ದಿನಾಂಕ 17 ಜೂನ್ 2022 ರಂದು ಸುತ್ತೂರಿನ ಐಸಿಎಆರ್ ಜೆಎಸ್ಎಸ್ ಕೃಷಿ ವಿಜ್ಞಾನ ಕೇಂದ್ರದ ವತಿಯಿಂದ ಹುಣಸೆಹಣ್ಣಿನ ಮೌಲ್ಯವರ್ಧನೆಯಲ್ಲಿ ಉದ್ಯಮಶೀಲತೆ ಅಭಿವೃದ್ಧಿ, ರಾಗಿ ಹೊಸ ತಳಿ ಕೆಎಂಆರ್ 316 ಕುರಿತಾದ ತರಬೇತಿಗಳನ್ನು ಹುಣಸೂರು ತಾಲ್ಲೂಕಿನ ಹುಲ್ಲ್ಯಾಳು ಗ್ರಾಮದಲ್ಲಿ ಹಮ್ಮಿಕೊಳ್ಳಲಾಗಿತ್ತು. ಹುಣಸೆ ಹಣ್ಣಿನ ಮೌಲ್ಯವರ್ಧನೆ ಕುರಿತಾದ ತರಬೇತಿಯಲ್ಲಿ ಜೆಎಸ್ಎಸ್ ಕೃಷಿ ವಿಜ್ಞಾನ ಕೇಂದ್ರದ ಗೃಹ ವಿಜ್ಞಾನಿ ಶ್ರೀಮತಿ ನೇತ್ರಾವತಿ ಎತ್ತಿನಮನಿಯವರು ಹುಣಸೆಹಣ್ಣಿನ ಆರೋಗ್ಯಕರ ಲಾಭಗಳು ಹಾಗೂ ಹುಣಸೆಹಣ್ಣಿನಿಂದ ತಯಾರಿಸಬಹುದಾದ ಮೌಲ್ಯವರ್ಧಿತ ಉತ್ಪನ್ನಗಳ ಬಗ್ಗೆ ಮಾಹಿತಿ ನೀಡಿ ಹುಣಸೆಹಣ್ಣಿನ ಚಿಗಳಿ ಹಾಗೂ ಹುಣಸೆಹಣ್ಣಿನ ಲಾಲಿಪಾಪ್ ತಯಾರಿಸುವುದನ್ನು ಪ್ರಾತ್ಯಕ್ಷಿಕೆ ಮೂಲಕ ತೋರಿಸಿಕೊಟ್ಟರು. ಮುಂದಿನ ದಿನಗಳಗಲ್ಲಿ ಒಂದು ಸ್ವ ಸಹಾಯ ಗುಂಪಿನ ಮಹಿಳೆಯರನ್ನು ಆಯ್ಕೆ ಮಾಡಿ ಅವರಿಗೆ ಹುಣಸೆಹಣ್ಣಿನ ಮೌಲ್ಯವರ್ಧಿತ ಉತ್ಪನ್ನಗಳ ತಯಾರಿಕೆ, ಪ್ಯಾಕಿಂಗ್ ಹಾಗೂ ಲೇಬಲ್ ಮಾಡುವುದರ ಬಗ್ಗೆ ತಾಂತ್ರಿಕ ಮಾಹಿತಿ ನೀಡಲಾಗುವುದು ಎಂದು ತಿಳಿಸಿದರು.


ಪೌಷ್ಟಿಕ ಕೈತೋಟ ಕಾರ್ಯಕ್ರಮ

ಮೈಸೂರು ತಾಲ್ಲೂಕಿನ ಚಿಕ್ಕಖಾನ್ಯ ಗ್ರಾಮದಲ್ಲಿ ದಿನಾಂಕ 22.06.2022 ರಂದು ಪೌಷ್ಟಿಕ ಕೈತೋಟದ ತರಬೇತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಕೆವಿಕೆಯ ಗೃಹ ವಿಜ್ಞಾನಿಯವರು ಪೌಷ್ಟಿಕ ಕೈತೋಟದ ಮಹತ್ವದ ಬಗ್ಗೆ ತಿಳಿಸಿ, ಕೈತೋಟದಲ್ಲಿ ಬೆಳೆಯಬಹುದಾದಂತಹ ತರಕಾರಿಗಳು ಹಾಗೂ ಸೊಪ್ಪುಗಳ ಬಗ್ಗೆ ವಿವರಿಸಿದರು. ನಂತರ ಆಯ್ದ 10 ಫಲಾನುಭವಿಗಳಿಗೆ ತರಕಾರಿ ಸಸಿಗಳು ಹಾಗೂ ಸೊಪ್ಪಿನ ಬೀಜಗಳನ್ನು ವಿತರಿಸಲಾಯಿತು.


ಮೇವು ಬೆಳೆ ಹಾಗೂ ಬೀನ್ಸ್ ತಳಿಯ ಕುರಿತು ತರಬೇತಿ

ಮೈಸೂರು ಜಿಲ್ಲೆಯ ಹುಣಸೂರು ತಾಲೂಕಿನ ಹುಲ್ಯಾಳು ಗ್ರಾಮದಲ್ಲಿ ದಿನಾಂಕ ೨೩.೦೬.೨೦೨೨ ರಂದು ಸುತ್ತೂರಿನ ಐಸಿಎಆರ್ ಜೆಎಸ್ಎಸ್ ಕೃಷಿ ವಿಜ್ಞಾನ ಕೇಂದ್ರ ವತಿಯಿಂದ ತರಬೇತಿ ಕಾರ್ಯಕ್ರಮ ನಡೆಯಿತು, ತರಬೇತಿ ಕಾರ್ಯಕ್ರಮದಲ್ಲಿ ಕೇಂದ್ರದ ಪಶು ವಿಜ್ಞಾನಿಯಾದ ರಕ್ಷಿತ್ ರಾಜ್ ರವರು ಮಾತನಾಡಿ ಹೊಸ ಮೇವಿನ ಬೆಳೆಗಳ ಬಗ್ಗೆ ಮತ್ತು ಅವುಗಳ ತಳಿಗಳ ಬಗ್ಗೆ ಮಾಹಿತಿ ನೀಡಿದರು. ಹಸುಗಳ ಹಾಲು ಉತ್ಪಾದನೆ ಹೆಚ್ಚಿಸಲು ಕೈಗೊಳ್ಳ ಬೇಕಾದ ಕ್ರಮಗಳ ಬಗ್ಗೆ ಮಾಹಿತಿ ನೀಡಿದರು, ನಂತರ ಮುಂಚೂಣಿ ಪ್ರಾತ್ಯಕ್ಷಿಕೆ ಅಡಿಯಲ್ಲಿ ಕೋಎಫ್ಎಸ್-೩೧ನ ಮೇವು ತಳಿಯ ಬೀಜಗಳನ್ನು ನೀಡಲಾಯಿತು. ತೋಟಗಾರಿಕೆ ವಿಜ್ಞಾನಿಯಾದ ಡಾ. ವಿನಯ್ ಜಿ.ಎಂ. ಮಾತನಾಡಿ ಬಳ್ಳಿ ಬೀನ್ಸ್ ಬೆಳೆಯ ವೈಜ್ಞಾನಿಕ ಬೇಸಾಯ ಪದ್ಧತಿಗಳ ಬಗ್ಗೆ ಮತ್ತು ಅದರ ಹೊಸ ತಳಿಗಳ ಬಗ್ಗೆ ಮಾಹಿತಿ ನೀಡಿದರು. ಭಾರತೀಯ ತೋಟಗಾರಿಕಾ ಸಂಶೋಧನಾ ಸಂಸ್ಥೆ ಹೆಸರಘಟ್ಟದಿಂದ ಬಿಡುಗಡೆ ಮಾಡಿರುವ ಅರ್ಕ ಮಂಗಳ ತಳಿಯ ಬೀಜಗಳನ್ನು ಆಯ್ದ ರೈತರುಗಳಿಗೆ ಮುಂಚೂಣಿ ಪ್ರಾತ್ಯಕ್ಷಿಕೆ ಅಡಿಯಲ್ಲಿ ನೀಡಲಾಯಿತು. ಈ ತರಬೇತಿಯಲ್ಲಿ ಗ್ರಾಮದ ಸುಮಾರು ೩೦ ಜನ ರೈತರು ಭಾಗವಹಿಸಿ ಉಪಯೋಗ ಪಡೆದುಕೊಂಡರು.


ದ್ವಿದಳ ಧಾನ್ಯಗಳ ಬೀಜೋತ್ಪಾದನೆ ತರಬೇತಿ

ದಿನಾಂಕ ೨೧.೦೬.೨೦೨೨ ರಂದು ಐಸಿಎಆರ್ ಜೆಎಸ್‌ಎಸ್ ಕೃಷಿ ವಿಜ್ಞಾನ ಕೇಂದ್ರ ಸುತ್ತೂರಿನಲ್ಲಿ ದ್ವಿದಳ ಧಾನ್ಯಗಳ ಬೀಜೋತ್ಪಾದನೆಗೆ ಇರುವ ಅವಕಾಶ ಹಾಗು ಲಾಭ, ಉತ್ತಮ ಇಳುವರಿಗೆ ಸೂಕ್ತ ಬೇಸಾಯ ಕ್ರಮಗಳ ಕುರಿತು ತರಬೇತಿ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ತರಬೇತಿಯಲ್ಲಿ, ಕೆವಿಕೆಯ ಹಿರಿಯ ವಿಜ್ಞಾನಿ ಹಾಗು ಮುಖ್ಯಸ್ಥರಾದ ಶ್ರೀಮತಿ ಹೆಚ್.ವಿ ದಿವ್ಯಾರವರ ಅನುಪಸ್ಥಿತಿಯಲ್ಲಿ ಅವರು ಶ್ರಮಜೀವಿ ಚಾನೆಲ್ ಗೆ ನೀಡಿದ್ದ ಸಂದರ್ಶನದ ವಿಡಿಯೋವನ್ನು ರೈತರಿಗೆ ತೋರಿಸಲಾಯಿತು. ಸಂದರ್ಶನದಲ್ಲಿ ಅವರು ಮಾತನಾಡಿ ದ್ವಿದಳ ಧಾನ್ಯಗಳ ಬೀಜೋತ್ಪಾದನೆಯಲ್ಲಿ ರೈತರಿಗೆ ಉದ್ದು, ಅಲಸಂದೆ ಬೀಜೋತ್ಪಾದನೆಗೆ ಅವಕಾಶವಿದ್ದು, ಮಾರುಕಟ್ಟೆ ಬೆಲೆಗಿಂತ ಶೇ.೨೦ರಷ್ಟು ಹೆಚ್ಚಿನ ಬೆಲೆ ಸಿಗುತ್ತದೆ. ಯೋಜನೆಯಲ್ಲಿ ಹಳದಿ ನಂಜು ನಿರೋಧಕ ಹೊಸ ತಳಿಗಳಾದ ಉದ್ದು ಎಲ್ ಬಿಜಿ ೭೯೧ ಹಾಗು ಅಲಸಂದೆ ಕೆಬಿಸಿ-೯ ತಳಿಯನ್ನು ನೀಡುತ್ತಿದ್ದು, ಉತ್ತಮ ಇಳುವರಿಯೊಂದಿಗೆ, ಉತ್ತಮ ಬೆಲೆ ರೈತರಿಗೆ ಸಿಗುತ್ತಿದೆ. ಚೆನ್ನಾಗಿ ಒಣಗಿದ ಉತ್ತಮ ಬೀಜವನ್ನು ಯೋಜನೆಯಲ್ಲಿ ಖರೀದಿಸುವುದಾಗಿ ತಿಳಿಸಿದರು. ಕೆವಿಕೆಯ ಬೇಸಾಯ ಶಾಸ್ತ್ರ ವಿಜ್ಞಾನಿಯಾದ ಶ್ರೀ ಶಾಮರಾಜ್ ರವರು ಉದ್ದು ಹಾಗು ಅಲಸಂದೆ ಬೆಳೆಗಳ ಸುಧಾರಿತ ಬೇಸಾಯ ಕ್ರಮಗಳಾದ ಬೀಜೋಪಚಾರ, ಸಮತೋಲನ ಗೊಬ್ಬರ ನಿರ್ವಹಣೆ, ರೋಗ ಹಾಗು ಕೀಟ ನಿರ್ವಹಣೆ ಹಾಗು ಹೊಸ ತಳಿಗಳ ಬೀಜೋತ್ಪಾದನೆಗೆ ಅನುಸರಿಸಬೇಕಾದ ಬೇಸಾಯ ಕ್ರಮಗಳ ಕುರಿತು ಮಾಹಿತಿ ನೀಡಿದರು. ತರಬೇತಿಯಲ್ಲಿ ೪೦ಕ್ಕೂ ಹೆಚ್ಚು ಬೀಜೋತ್ಪಾದಕ ರೈತರು ಭಾಗವಹಿಸಿದ್ದರು.


ಕೆವಿಕೆಗೆ ಗಣ್ಯ ವ್ಯಕ್ತಿಗಳ ಭೇಟಿ

ದಿನಾಂಕ 28.06.2022 ರಂದು ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯ ರಿಜಿಸ್ಟ್ರಾರ್ ರವರಾದ ಡಾ. ಬಸವೇಗೌಡ ರವರು ಜೆಎಸ್ಎಸ್ ಕೆವಿಕೆಯ ಪ್ರಾತ್ಯಕ್ಷಿಕೆ ಘಟಕಗಳಿಗೆ ಭೇಟಿ ನೀಡಿ ವಿಜ್ಞಾನಿಗಳೊಂದಿಗೆ ಕೆವಿಕೆ ಚಟುವಟಿಕೆಗಳ ಕುರಿತು ಚರ್ಚಿಸಿದರು. ಜೆಎಸ್ಎಸ್ ಕೆವಿಕೆಯ ಅಗ್ರಿ ಕ್ಲಿನಿಕ್ ಹಾಗೂ ಬೀಜೋತ್ಪಾದನೆ ಚಟುವಟಿಕೆ ಪ್ರಗತಿಯನ್ನು ಶ್ಲಾಘಿಸಿದರು. ಇದೇ ಸಂದರ್ಭದಲ್ಲಿ ಪೂಜ್ಯ ಶ್ರೀಗಳವರನ್ನು ಭೇಟಿ ಮಾಡಿ ಆಶೀರ್ವಾದ ಪಡೆದುಕೊಂಡರು.


ದೇಸಿ ವಿದ್ಯಾರ್ಥಿಗಳಿಗೆ ತರಬೇತಿ

ಶ್ರೀಮತಿ ಹೆಚ್.ವಿ. ದಿವ್ಯಾ, ಹಿರಿಯ ವಿಜ್ಞಾನಿ ಮತ್ತು ಮುಖ್ಯಸ್ಥರು (ಪ್ರಭಾರ) ರವರು ಬೀಜೋಪಚಾರ, ಬೀಜವನ್ನು ಮೊಳಕೆ ಬರಿಸುವ ವಿಧಾನಗಳು ಹಾಗೂ ಸುರಕ್ಷಿತ ಬೀಜ ಶೇಖರಣೆ ಕುರಿತು ಮೈಸೂರು ತಾಲೂಕಿನ ನಾಗನಹಳ್ಳಿಯಲ್ಲಿ ನಡೆದ ದೇಸಿ ಕಾರ್ಯಕ್ರಮದಲ್ಲಿ ಭಾಗವಹಿಸಿದ ಶಿಬಿರಾರ್ಥಿಗಳಿಗೆ ಪದ್ಧತಿ ಪ್ರಾತ್ಯಕ್ಷಿಕೆ ಮೂಲಕ ತಿಳಿಸಿದರು. ಅಲ್ಲದೇ, ವಿವಿಧ ಬೆಳೆಗಳ ಕೀಟ ಹಾಗೂ ರೋಗ ನಿಯಂತ್ರಣ ಕುರಿತು ಮಾಹಿತಿ ನೀಡಿದರು. 20 DAESI ಶಿಬಿರಾರ್ಥಿಗಳು ತರಬೇತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಪ್ರಯೋಜನ ಪಡೆದುಕೊಂಡರು.


ಭತ್ತದ ತಳಿ ಕೆಎಂಪಿ 220 ಕುರಿತು ತರಬೇತಿ

ಟಿ. ನರಸೀಪುರ ತಾಲೂಕಿನ ಡಣಾನಾಯಕನಪುರದಲ್ಲಿ ಒಂದು ದಿನದ ತರಬೇತಿ ಕಾರ್ಯಕ್ರಮವನ್ನು ಶ್ರೀಮತಿ ಹೆಚ್.ವಿ. ದಿವ್ಯಾ, ಹಿರಿಯ ವಿಜ್ಞಾನಿ ಮತ್ತು ಮುಖ್ಯಸ್ಥರು (ಪ್ರಭಾರ) ರವರು ಪದ್ಧತಿ ಪ್ರಾತ್ಯಕ್ಷಿಕೆಯ ಮೂಲಕ ಭತ್ತದ ಬೀಜೋಪಚಾರ ಹಾಗೂ ಸಮಗ್ರ ಕೀಟ ಮತ್ತು ರೋಗ ನಿರ್ವಹಣೆ ಕುರಿತು ದಿನಾಂಕ 15.07.2022 ರಂದು ಹಮ್ಮಿಕೊಂಡಿದ್ದರು. ಶ್ರೀ ಶಾಮರಾಜ್‌, ವಿಜ್ಞಾನಿ (ಬೇಸಾಯ ಶಾಸ್ತ್ರ) ರವರು ಭತ್ತದಲ್ಲಿ ಡ್ರಂ ಸೀಡರ್‌ನ ಉಪಯೋಗ, ಕಳೆ ನಿರ್ವಹಣೆ ಹಾಗೂ ಪೋಷಕಾಂಶಗಳ ನಿರ್ವಹಣೆ ಕುರಿತು ಮಾಹಿತಿ ನೀಡಿದರು. 34 ರೈತರು ಸದರಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಪ್ರಯೋಜನೆ ಮಾಹಿತಿ ಪಡೆದರು.


ಐಸಿಎಆರ್ ಸಂಸ್ಥಾಪನಾ ದಿನಾಚರಣೆ

ದಿನಾಂಕ 16.07.2022 ರಂದು ನವದೆಹಲಿಯಲ್ಲಿ ಜರುಗಿದ ಐಸಿಎಆರ್ ಸಂಸ್ಥಾಪನಾ ದಿನಾಚರಣೆಯ ನೇರ ಪ್ರಸಾರವನ್ನು ಕೆವಿಕೆಯಲ್ಲಿ ಆಯೋಜಿಸಲಾಗಿತ್ತು. ಸದರಿ ಕಾರ್ಯಕ್ರಮದಲ್ಲಿ ಭಾರತ ಸರ್ಕಾರದ ಕೃಷಿ ಮಂತ್ರಿ ಶ್ರೀನರೇಂದ್ರ ಸಿಂಗ್ ತೋಮರ್ ರವರು ಹಾಗೂ ಐಸಿಎಆರ್ ನ ನಿರ್ದೇಶಕರಾದ ಡಾ. ತ್ರೀಲೋಚನ್ ಮಹಾಪಾತ್ರರವರು ಭಾಗವಹಿಸಿದ್ದರು. ಸದರಿ ತರಬೇತಿ ಕಾರ್ಯಕ್ರಮದಲ್ಲಿ ಶ್ರೀ ಹೆಚ್.ವಿ. ದಿವ್ಯಾ ರವರು ಭತ್ತದಲ್ಲಿ ಬೀಜ ಸಂಸ್ಕರಣೆ, ಸಮಗ್ರ ಪೋಶಕಾಂಶಗಳ ನಿರ್ವಹಣೆ ಹಾಗೂ ನ್ಯಾನೋ ಯೂರಿಯಾ ಬಳಕೆ ಕುರಿತು ಮಾಹಿತಿ ನೀಡಿದರು. ಶ್ರೀ ಶಾಮರಾಜ್, ವಿಜ್ಞಾನಿ (ಬೇಸಾಯ ಶಾಸ್ತ್ರ) ರವರು ನವೀಕರಿಸಬಹುದಾದ ಇಂಧನ ಮೂಲಗಳಾದ ಸೌರಶಕ್ತಿ, ಪವನಶಕ್ತಿ, ಜಲಶಕ್ತಿಗಳಿಂದ ವಿದ್ಯುತ್ ಉತ್ಪಾದನೆ ಕುರಿತಾದ ಮಾಹಿತಿ ನೀಡಿ ಪೆಟ್ರೋಲಿಯಂ ಉತ್ಪನ್ನಗಳ ಹಾಗೂ ವಿದ್ಯುತ್ ಶಕ್ತಿಗಳ ಮಿತ ಬಳಕೆ ಕುರಿತು ವಿವರವಾಗಿ ತಿಳಿಸಿದರು. 52ಕ್ಕೂ ಹೆಚ್ಚು ರೈತರು ಹಾಗೂ ರೈತ ಮಹಿಳೆಯರು ಕಾರ್ಯಕ್ರಮದಲ್ಲಿ ಭಾಗವಹಿಸಿ ಪ್ರಯೋಜನ ಪಡೆದುಕೊಂಡರು.


ದೇಸಿ ಬೀಜಗಳ ಕುರಿತು ತರಬೇತಿ

ಸುತ್ತೂರಿನ ಐಸಿಎಆರ್ ಜೆಎಸ್ಎಸ್ ಕೃಷಿ ವಿಜ್ಞಾನಕೇಂದ್ರ ಹಾಗು ಸ್ವಾಮಿ ವಿವೇಕಾನಂದಯೂತ್ ಮೂವ್ ಮೆಂಟ್, ಸರಗೂರುಇವರ ಸಹಯೋಗದಲ್ಲಿ ಹೆಚ್.ಡಿಕೋಟೆಯ ಹುಣಸೆಕುಪ್ಪೆ ಹಾಗು ಎಂ.ಜಿ ಹಳ್ಳಿ ಹಾಡಿಯಗಿರಿಜನರಿಗೆ ದೇಸಿ ಬೀಜಗಳ ಬೀಜೋತ್ಪಾದನೆ, ಬೀಜ ಸಂರಕ್ಷಣೆತರಬೇತಿ ಹಾಗು ಅಧ್ಯಯನ ಪ್ರವಾಸವನ್ನು ಪ್ರಗತಿಪರರೈತರೂ, ದೇಸಿ ತಳಿಗಳ ಬೀಜೋತ್ಪಾದಕರು ಹಾಗು ಸಂರಕ್ಷಕರಾದ ಶ್ರೀ ಕಾಳಪ್ಪರ ಗ್ರಾಮಪಿರಿಯಾಪಟ್ಟಣದ ಹಿಟ್ನೆ ಹೆಬ್ಬಾಗಿಲಿನಲ್ಲಿ ದಿನಾಂಕ 21.07.2022 ರಂದು ಆಯೋಜಿಸಲಾಗಿತ್ತು. ತರಬೇತಿಯಲ್ಲಿ ಹಾಡಿಯ ೩೧ ರೈತ ಹಾಗು ರೈತ ಮಹಿಳೆಯರು, ಹಾಡಿಯ ಮೇಲ್ಷಿಚಾರಕರಾದ ನಾಗೇಶ್, ಸಮುದಾಯಕಾರ್ಯಕರ್ತರಾದ ಸುರೇಶ್, ಈಶಾ ಫೌಂಡೇಷನ್ನಿನ ಸ್ವಸಹಾಯಕರಾದ ಶ್ರೀ ಮಂಜುನಾಥ್ ಇನ್ನಿತರರೂ ಸೇರಿ ೩೭ಕ್ಕೂ ಹೆಚ್ಚಿನ ರೈತರು ಭಾಗವಹಿಸಿ ಪ್ರಯೋಜನ ಪಡೆದುಕೊಂಡರು


ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಸಹಯೋಗದೊಂದಿಗೆ ತರಬೇತಿ

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ವತಿಯಿಂದ ರೈತರ ನಡಿಗೆ ಎಸ್.ಬಿ.ಐ ಕಡೆಗೆ ಕುರಿತು ಕಾರ್ಯಕ್ರಮದಲ್ಲಿ ರೈತರಿಗೆ ಸಿಗುವ ಬೆಳೆ ಸಾಲದ ಕುರಿತು ಮಾಹಿತಿ ನೀಡಲಾಯಿತು. ಸದರಿ ಸಮಾರಂಭದಲ್ಲಿ ಶ್ರೀಮತಿ ಹೆಚ್.ವಿ. ದಿವ್ಯಾ, ಹಿರಿಯ ವಿಜ್ಞಾನಿ ಮತ್ತು ಮುಖ್ಯಸ್ಥರು (ಪ್ರಭಾರ) ಭಾಗವಹಿಸಿ ಮಾತನಾಡಿ ಭಾರತ ಸರ್ಕಾರವು ರೈತರಿಗೆ ಜಾರಿಗೆ ತಂದಿರುವ ವಿವಿಧ ಕೃಷಿ ಯೋಜನೆಗಳ ಕುರಿತು ಮಾಹಿತಿ ನೀಡಿದರು. ಸುಮಾರು 700 ರೈತ ಹಾಗೂ ರೈತ ಮಹಿಳೆಯರು ಸದರಿ ಸಮಾರಂಭದಲ್ಲಿ ಭಾಗವಹಿಸಿದ್ದರು.


ದೇಸಿ ಬೀಜಗಳ ಕುರಿತು ತರಬೇತಿ

ದಿನಾಂಕ 30 ಜುಲೈ 2022 ರಂದು ತಿ. ನರಸೀಪುರ ತಾಲ್ಲೂಕಿನ ಡಣಾಯಕನಪುರ ಗ್ರಾಮದಲ್ಲಿ ಹೊಸ ಬಹುವಾರ್ಷಿಕ ಹೈಬ್ರೀಡ್ ನೇಪಿಯರ್ ಮೇವಿನ ತಳಿಗಳ ಕುರಿತು ಜೆಎಸ್ಎಸ್ ಕೆವಿಕೆ ವತಿಯಿಂದ ತರಬೇತಿಯನ್ನು ಹಮ್ಮಿಕೊಳ್ಳಲಾಗಿತ್ತು. ತರಬೇತಿಯಲ್ಲಿ ಬಹುವಾರ್ಷಿಕ ಹೈಬ್ರೀಡ್ ನೇಪಿಯರ್ ಮೇವಿನ ತಳಿಗಳಾದ ಬಿಎನ್ಹೆಚ್– 1೦, ಪಿಬಿಎನ್-342 ಮತ್ತು ಕೋ-5 ತಳಿಗಳ ಬೇಸಾಯ ಹಾಗೂ ಅವುಗಳ ವಿಶೇಷತೆಗಳ ಬಗ್ಗೆ ಕೆವಿಕೆಯ ಪಶು ವಿಜ್ಞಾನಿಯಾದ ಡಾ. ರಕ್ಷಿತ್ರಾಜ್ ಯು. ಎಮ್.ರವರು ಮಾಹಿತಿ ನೀಡಿದರು. 32 ರೈತರು ಸದರಿ ತರಬೇತಿಯಲ್ಲಿ ಭಾಗವಹಿಸಿದ್ದರು. ಮೇವಿನ ಕಡ್ಡಿಗಳು ಹಾಗೂ ಬೇರುಗಳನ್ನು ರೈತರಿಗೆ ವಿತರಿಸಲಾಯಿತು.

ಹಕ್ಕುಗಳನ್ನು ಕಾಯ್ದಿರಿಸಿದೆ : ಹಿರಿಯ ವಿಜ್ಞಾನಿ ಮತ್ತು ಮುಖ್ಯಸ್ಥರು, ಐಸಿಎಆರ್ ಜೆಎಸ್ಎಸ್ ಕೃಷಿ ವಿಜ್ಞಾನ ಕೇಂದ್ರ, ಸುತ್ತೂರು, ಮೈಸೂರು ಜಿಲ್ಲೆ                    ಭೇಟಿ ಸಂಖ್ಯೆ: